ಕಾವ್ಯ ಸಂವೇದನೆಯಿಲ್ಲದೆ ಕವಿತೆ ರಚನೆಯಾಗದು...

Book
Published on

ಕವಿ ಎಚ್​.ಡುಂಡಿರಾಜ ಅಭಿಪ್ರಾಯ

ಡಾ. ಕಾತ್ಯಾಯಿನಿ ರಚಿತ ಪುಸ್ತಕ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಹಜವಾಗಿ ಬರೆದರೆ ಅದು ಕಾವ್ಯಮಯ. ಯಾರದೋ ಒತ್ತಾಯಕ್ಕೆ ಬರೆದರೆ ಕಾವ್ಯ ಮಾಯ. ಕವಿತೆ ಸರಳವಾಗಿದ್ದು ಕೇಳುಗರ, ಓದುಗರ ಗಮನ ಸೆಳೆಯಬೇಕು. ಪ್ರತಿಭೆ, ಬರೆಯುವ ಸ್ಛೂರ್ತಿ ಎರಡೂ ಕವಿಗೆ ಅಗತ್ಯವಾಗಿದೆ. ಕಾವ್ಯ ಸಂವೇದನೆ ಬೆಳೆಸಿಕೊಳ್ಳದಿದ್ದರೆ ಉತ್ತಮ ಕವಿತೆ ರಚನೆಯಾಗದು ಎಂದು ಕವಿ ಎಚ್​.ಡುಂಡಿರಾಜ ಅಭಿಪ್ರಾಯಪಟ್ಟರು.

ಉಡುಪಿಯ ಕುಂಜಿಬೆಟ್ಟುವಿನಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಆಶ್ರಯದಲ್ಲಿ ಮಾ.21ರಂದು ಸಂಜೆ ಆಯೋಜಿಸಿದ್ದ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ರಚಿತ ತಂಬೂರಿ ಕವನ ಸಂಕಲನ ಹಾಗೂ ಕಾಯ ತಂಬೂರಿ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಅಪಾರ ಪ್ರೋತ್ಸಾಹ

ದೊಡ್ಡ ದೊಡ್ಡ ಶಬ್ದ, ಪ್ರಾಸ, ಛಂದಸ್ಸು, ಲಯಬದ್ಧವಾಗಿ ಬರೆದರೂ ಕೆಲವೊಮ್ಮೆ ಕವಿತೆಯ ಆಕಾರ ಬರೋದಿಲ್ಲ. ಹಾಡು, ನಾಟಕ ಬರೆಯುವವರಿಗೆ ಇಂದು ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿದೆ. ನಳ ತಿರುಗಿಸಿದರೆ ನೀರು ಬರದೇ ಇರಬಹುದು. ಆದರೆ, ವಾಟ್ಸ್ಯಾಪ್​ ಆನ್​ ಮಾಡಿದರೆ ಬೇಡವಾದ, ಅರ್ಥವೇ ಆಗದ ಹಾಗೂ ಅತ್ಯುತ್ತಮವಾದ ನೂರಾರು ಕವಿತೆಗಳು ಬರುತ್ತವೆ. ಸಾಹಿತ್ಯದಲ್ಲಿ ಋಷಿಯಾಗದಿದ್ದರೆ, ಖುಷಿ ಇಲ್ಲದಿದ್ದರೆ ಕವಿಯಾಗಲಾರರು ಎಂದರು.

ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಂಕರ, ಉದ್ಯಮಿ ವಿಶ್ವನಾಥ ಶೆಣೈ, ಲೇಖಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು.

ಲಹರಿ ಪ್ರಾರ್ಥಿಸಿದರು. ಶಿಲ್ಪಾ ಜೋಶಿ ಸ್ವಾಗತಿಸಿದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್​.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net