

ಮೈಸೂರು: ಬಾಹ್ಯಕಾಶ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಶಿಕ್ಷಣ ಕ್ಷೇತ್ರ ಕುರಿತು ಡಾ.ಕಸ್ತೂರಿ ರಂಗನ್ ಅವರಿಗೆ ಸದಾ ತುಡಿತ ಇತ್ತು ಎಂದು ರಾಯಚೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಹರೀಶ್ ರಾಮಸ್ವಾಮಿ ಬಣ್ಣಿಸಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ಮಹಾವಿದ್ಯಾಲಯದ ಶಿಕ್ಷಕ ಸಂಘದಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಕಸ್ತೂರಿ ರಂಗನ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು.
ವಿಜ್ಞಾನಿಯಾಗಿ ಕಸ್ತೂರಿ ರಂಗನ್ ಅವರು ಸಾಕಷ್ಟು ಹೆಸರು ಗಳಿಸಿದ್ದರೂ, ಶಿಕ್ಷಣ ಕ್ಷೇತ್ರದ ಕುರಿತು ಅಪಾರ ಒಲವು ಇತ್ತು. ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡು ಸದಾ ಸಮಚಿತ್ತದಲ್ಲಿ ಚರ್ಚಿಸುತ್ತಿದ್ದರು. ಉತ್ತಮ ಜ್ಞಾನಿಯಾದ ಅವರಿಗೆ ಭಾಷೆ, ಭಾಷಣ ಕರಗತವಾಗಿತ್ತು. ಇತರರು ಹೇಳುವುದನ್ನು ಕೇಳುವ ಗುಣ ಅವರಲ್ಲಿತ್ತು ಎಂದರು.
ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗಬೇಕು, ಜ್ಞಾನ ಆಧಾರಿತ ಶಿಕ್ಷಣ ಮಕ್ಕಳಿಗೆ ದೊರೆಯುವಂತಾಗಬೇಕು ಎನ್ನುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರೂಪರೇಷ ಸಮಿತಿ ಅಧ್ಯಕ್ಷರಾಗಿ ಸಾಕಷ್ಟು ಶ್ರಮಿಸಿದರು. ದೇಶ ಸಾಫ್ಟ್ವೇರ್ ಕ್ಷೇತ್ರದಲ್ಲಿ ಬೆಳೆದಿದ್ದರೂ ಹಾರ್ಡ್ವೇರ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಪ್ರತಿಪಾದಿಸಿದ್ದರು ಎಂದು ಹೇಳಿದರು.
ಎನ್ಇಪಿ ವೈಫಲ್ಯಕ್ಕೆ ಶಿಕ್ಷಕರು ಕಾರಣ:
ಮುಂದಿನ ಶಿಕ್ಷಣ ವ್ಯವಸ್ಥೆಗೆ ಮಾರ್ಗಸೂಚಿಯಂತಿದ್ದ ಮಹತ್ವಾಕಾಂಕ್ಷೆಯ ಎನ್ಇಪಿ ವೈಫಲ್ಯಕ್ಕೆ ಶಿಕ್ಷಕರೇ ಮೂಲ ಕಾರಣ ಎಂದು ಡಾ.ಹರೀಶ್ ರಾಮಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ಎನ್ಇಪಿ ಜಾರಿಯಾದರೆ ಹೆಚ್ಚಿನ ಹೊರೆ ಬೀಳುತ್ತದೆ. ಕಲಿಕೆ, ಸಂಶೋಧನೆ ಮಾಡಬೇಕಾಗುವ ಒತ್ತಡ ಬರುತ್ತದೆ ಎನ್ನುವ ಕಾರಣದಿಂದ ಸಾಕಷ್ಟು ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಹಿಂಜರಿದರು. ಇದರಿಂದ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಭಾರತವನ್ನು ತಿರುಗಿ ನೋಡುವಂತೆ ಮಾಡುವ ಎನ್ಇಪಿ ಸಾಕಷ್ಟು ರಾಜ್ಯಗಳಲ್ಲಿ ವಿಫಲವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯದ ಶಿಕ್ಷಕ ಸಂಘದ ಪ್ರಮುಖ ಪ್ರೊ.ಜಿ.ಸಿ.ರಾಜಣ್ಣ ಮಾತನಾಡಿ, ಇತರರಿಗೆ ಮಾದರಿಯಾಗುವಂತೆ ಜೀವನ ನಡೆಸಿದ್ದ ಡಾ.ಕಸ್ತೂರಿ ರಂಗನ್ ಅವರು, ಶೈಕ್ಷಣಿಕ ವಲಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು ಎಂದರು.
ದೇಶದ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎನ್ನವು ಅಭಿಲಾಷೆ ಹೊಂದಿದ್ದರು. ಅದಕ್ಕಾಗಿ ಶಿಕ್ಷಕರು ಸೇರಿದಂತೆ ಎಲ್ಲ ಕ್ಷೇತ್ರದವರೊಂದಿಗೆ ಮುಕ್ತ ಸಂವಾದ ನಡೆಸಿ ಎನ್ಇಪಿಗೆ ಒಂದು ರೂಪಕೊಟ್ಟಿದ್ದರು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ವೃಷಭೇಂದ್ರ ಸ್ವಾಮಿ, ರಾಜ್ಯ ಉಪಾಧ್ಯಕ್ಷ ಎ.ಗಂಗಾಧರಾಚಾರಿ, ವಿಭಾಗ ಪ್ರಮುಖ ಕೆ.ಆರ್.ರಾಜು, ಜಿಲ್ಲಾ ಅಧ್ಯಕ್ಷ ಕೆಂಪಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ಕುಮಾರ್ ಇತರರು ಇದ್ದರು.