

ಹುಬ್ಬಳ್ಳಿ: ಕನ್ನಡ ಛಂದೋವಿಕಾಸ ಕೃತಿಯ ಮೂಲಕ ಡಾ.ಡಿ.ಎಸ್. ಕರ್ಕಿ ಅವರು ಕನ್ನಡ ಸಾಹಿತ್ಯಾಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಪ್ರಾಧ್ಯಾಪಕ ಎಚ್.ಎಚ್. ನದಾಫ ಹೇಳಿದರು.
ನುಡಿ ಕನ್ನಡ ಬಳಗದ ವತಿಯಿಂದ ಇಲ್ಲಿಯ ಭೈರಿದೇವರಕೊಪ್ಪದ ಕಲ್ಪತರು ನಿಲಯದ ಜಾನಪದ ಜಗಲಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಡಿ.ಎಸ್. ಕರ್ಕಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶೀಯ ಛಂದಸ್ಸಿಗೆ ಮೆರಗು ನೀಡಿದ ಕವಿ ಕರ್ಕಿಯವರು ಎಂದು ಹೇಳಿದರು.
ಜೀವಿ ಕಲಾ ಬಳಗದ ಅಧ್ಯಕ್ಷ ಗದಿಗೆಯ್ಯ ಹಿರೇಮಠ ಮಾತನಾಡಿ, ಕರ್ಕಿಯವರು ಕನ್ನಡ ಸಾಹಿತ್ಯ ಸರಳಗೊಳಿಸಿದ್ದಾರೆ. ಅವರ ಸರಳ ಜೀವನ, ನಡೆ-ನುಡಿ ನಮಗೆಲ್ಲರಿಗೂ ಮಾದರಿ. ಎಸ್.ಡಿ. ಇಂಚಲ, ಬಂ.ಗಂ. ತುರಮರಿ, ಗಂಗಪ್ಪ ವಾಲಿ, ನಿರಂಜನ ವಾಲಿಶೆಟ್ಟರ ಮುಂತಾದವರನ್ನು ಸ್ಮರಿಸಿ, ಇವರ ಕನ್ನಡ ನಾಡು-ನುಡಿಯ ಬಗೆಗಿನ ಅಭಿಮಾನ ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಕರ್ಕಿ ವೇದಿಕೆ ಉಪಾಧ್ಯಕ್ಷ ಡಾ.ಬಿ.ಎಸ್. ಮಾಳವಾಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ನಗರ ಘಟಕದ ಮಾಜಿ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ನುಡಿ ಕನ್ನಡ ಬಳಗದ ಕಾರ್ಯಾಧ್ಯಕ್ಷ ವೀರಣ್ಣ ಹೂಲಿ ಹಾಗೂ ಅಧ್ಯಕ್ಷ ಏಕನಾಥ ಕಲಬುರ್ಗಿ ಅವರು ಕರ್ಕಿಯವರ ಕುರಿತು ಮಾತನಾಡಿದರು.
ಜಾನಪದ ತಜ್ಞ ಡಾ. ರಾಮು ಮೂಲಗಿ ನಿರೂಪಿಸಿದರು. ಶಿವಾನಂದ ಬೆಂಗೇರಿ ವಂದಿಸಿದರು. ಸಾಹಿತಿ ಮಾರುತಿ ಜಾಧವ, ನುಡಿ ಕನ್ನಡ ಬಳಗದ ಸದಸ್ಯರು ಹಾಗೂ ಜಾನಪದ ಕಲಾವಿದರು ಉಪಸ್ಥಿತರಿದ್ದರು.