ಡಾ. ಕಾಂಮ್ರೇಕರ ಸಮ್ಮೇಳನದ ಸರ್ವಾಧ್ಯಕ್ಷ

HLY KAMBREKAR
Published on

ಹಳಿಯಾಳ: ಹಳಿಯಾಳ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಲೇಖಕ, ಕೃಷಿ ವಿಜ್ಞಾನ ಡಾ. ಡಿ.ಎನ್. ಕಾಂಮ್ರೇಕರ ಆಯ್ಕೆಯಾಗಿದ್ದಾರೆ.

ಪಟ್ಟಣದ ಚಂದಾವನದಲ್ಲಿ ಗುರುವಾರ ಆಯೋಜಿಸಿದ್ದ ಹಳಿಯಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾಮ್ರೇಕರ ಆಯ್ಕೆಗೆ ಸರ್ವ ಸದಸ್ಯರು ಸಹಮತ ಸೂಚಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಅನುದಾನ ಇಲ್ಲದಿದ್ದರೂ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಲಾಗುತ್ತಿದ್ದು, ಈ ಸಮ್ಮೇಳನದ ಯಶಸ್ವಿಗೆ ಸರ್ವರೂ ಜೊತೆಯಾಗಬೇಕು. ಈ ಬಾರಿ ಹಳಿಯಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಧ್ಯಕ್ಷರಾಗಿ ಕೃಷಿ ವಿಜ್ಞಾನಿ ಬರಹಗಾರ ಡಾ. ಬಿ.ಎನ್. ಕಾಂಮ್ರೇಕರ ಅವರನ್ನು ಆಯ್ಕೆ ಮಾಡಲಾಗಿದೆ. ಕೃಷಿ ಪ್ರಧಾನವಾದ ತಾಲೂಕಿನಲ್ಲಿ ಕೃಷಿ ವಿಜ್ಞಾನಿ ಹಾಗೂ ಬರಹಗಾರರನ್ನು ಸಮ್ಮೇಳಾಧ್ಯಕ್ಷರನಾಗಿ ಮಾಡಲಾಗಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷೆ ಸುಮಂಗಲಾ ಅಂಗಡಿ ಮಾತನಾಡಿ, ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹಾಗೂ ತಾಲೂಕಿನ ಎಲ್ಲಾ ಕನ್ನಡ ಪರ ಸಂಘಟನೆಯರು ಜೊತೆಗೆ ಇಲಾಖಾ ಅಧಿಕಾರಿಗಳು ನೆರವಾಗಬೇಕು ಎಂದರು.

ಜಿಲ್ಲಾ ಪದಾಧಿಕಾರಿಯಾದ ಸಿದ್ದಪ್ಪ ಬಿರಾದಾರ, ತಾಲೂಕು ಗೌರವ ಕಾರ್ಯದರ್ಶಿ ಶಾಂತಾರಾಮ ಚಿಬ್ಬುಲಕರ, ಬಸವರಾಜ ಇಟಗಿ, ಕಾಳಿದಾಸ ಬಡಿಗೇರ, ಗೋಪಾಲ ಮೇತ್ರಿ, ಶ್ರೀಶೈಲ ಹುಲ್ಲೇನವರ, ಗೋಪಾಲ ಅರಿ, ಕಲ್ಪನಾ ಹುದ್ದಾರ, ಸುಗುಣಾ ಹೆಗಡೆ, ಇತರರಿದ್ದರು.

ಸಮ್ಮೇಳನಾಧ್ಯಕ್ಷರ ಪರಿಚಯ: ತಾಲೂಕಿನ ಶೇಕನಕಟ್ಟಾ ಗ್ರಾಮದವರಾದ ಕಾಂಮ್ರೇಕರ ಅವರು ಶೇಕನಕಟ್ಟಾ ಮತ್ತು ಸಾಂಬ್ರಾಣಿಯಲ್ಲಿ ಪ್ರಾಥಮಿಕ ಶಿಕ್ಷಣ, ಕಾರ್ವೆಲ್ ಶಾಲೆಯಲ್ಲಿ ಪ್ರೌಢ ಶಿಕ್ಷಣ, ದಾಂಡೇಲಿ ಬಂಗೂರನಗರ ಕಾಲೇಜಿನಲ್ಲಿ ಪಪೂ ಶಿಕ್ಷಣ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net