ಪ್ರಗತಿಪರ ಚಿಂತಕರು ಡಾ. ಶರ್ಮಾ, ನ್ಯಾಯಾಧೀಶ ವಿ. ಗೋಪಾಲಗೌಡ ಅಭಿಮತ

IMG_20230930_205422_553.jpg
Published on

ಹುಬ್ಬಳ್ಳಿ: ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಭಟನೆ ಮಾಡುವ ಶಕ್ತಿ ಹೋರಾಟಗಾರರಿಗೆ ಇದೆ. ಹೋರಾಟದ ಮೂಲ ಜನರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಗತಿಪರ ಚಿಂತಕರು ಮಾಡುತ್ತ ಬಂದಿದ್ದು, ಈ ಸಾಲಿನಲ್ಲಿ ಡಾ. ಕೆ.ಎಸ್. ಶರ್ಮಾ ಕೂಡಾ ಒಬ್ಬರು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ವಿ. ಗೋಪಾಲಗೌಡ ಹೇಳಿದರು.

ಇಲ್ಲಿಯ ಗೋಕುಲ ರಸ್ತೆ ಬಸವೇಶ್ವರನಗರದ ವಿಶ್ವಶ್ರಮ ಚೇತನ ಆವರಣದಲ್ಲಿ ಸಂಜೀವಿನಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಸಹಯೋಗದಲ್ಲಿ ಏರ್ಪಡಿಸಿದ್ದ ಹೋರಾಟಗಾರ, ಪ್ರಗತಿಪರ ಚಿಂತಕ ಡಾ. ಕೆ.ಎಸ್. ಶರ್ಮಾ ಅವರ 90ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದುದ್ದಕ್ಕೂ ಜನರ ಮಧ್ಯೆ ಇದ್ದು ನಿರಂತರವಾಗಿ ಹೋರಾಟಗಳ ಮುಖಾಂತರ ಸಮಾಜವಾದದ ಪರವಾಗಿ ಕೆಲಸ ಮಾಡಿದ ಇವರು ನಿಜವಾದ ಮನುಕುಲದ ದೇವರು ಎಂದು ಬಣ್ಣಿಸಿದರು.

ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮೋಹನ ಕಾತರಕಿ ಮಾತನಾಡಿ, ಡಾ. ಕೆ.ಎಸ್. ಶರ್ಮಾ ಅವರು ಮಾರ್ಕ್ಸ್ವಾದಿ ಆಗಿದ್ದರೂ, ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಅಲ್ಲದೇ ಅದೇ ಮಾರ್ಗದಲ್ಲಿಯೇ ಶೋಷಿತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ ಹಾಗೂ ನಿರಂತರ ಮಾಡುತ್ತಿದ್ದಾರೆ ಎಂದರು.

ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಮಾತನಾಡಿ, ಸರ್ಕಾರದ ಕಣ್ಣು ತೆರೆಸುವ ಕಾರ್ಯವನ್ನು ಯಾವ ಕಾಮಿರ್ಕ ನಾಯಕನೂ ಶರ್ಮಾ ಅವರಂತೆ ಮಾಡಿಲ್ಲ ಎಂದರು.

ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಕೆ.ಎಸ್. ಶರ್ಮಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದುಡಿಯುವ ವರ್ಗ ಆಳುವ ವರ್ಗ ಆಗಬೇಕು. ಎಲ್ಲಿಯತನಕ ಜನರು ಪ್ರಜ್ಞಾವಂತರಾಗುವುದಿಲ್ಲವೋ ಅಲ್ಲಿಯವರೆಗೆ ಬದಲಾವಣೆಯಾಗುವುದಿಲ್ಲ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಮಹಾವಿದ್ಯಾಲಯದ ಚೇರ್ಮನ್ ಮೋಹನ ಲಿಂಬಿಕಾಯಿ, ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಪ್ರೊ. ಕೆ.ಎಸ್. ಕೌಜಲಗಿ ಅವರು ಡಾ. ಕೆ.ಎಸ್. ಶರ್ಮಾ ಅವರ ಹೋರಾಟದ ಹಾದಿ, ಸಾಹಿತ್ಯ ಹಾಗೂ ಅವರ ಜೀವನಗಾಥೆ ಕುರಿತು ಮಾತನಾಡಿದರು.

ಕಲಾವಿದ ಸಿದ್ದು ಇಟಗಿ ತಮ್ಮ ಕಲಾ ಕುಂಚದ ಮೂಲಕ ಡಾ. ಕೆ.ಎಸ್.ಶರ್ಮಾ ಅವರ ಚಿತ್ರ ಬಿಡಿಸಿದರು. ಕಲಾವಿದ ಹರೀಶ್ ಮಾಳಪ್ಪನವರ ಕಣ್ಣಿನಲ್ಲಿ ಚಿತ್ರ ಬಿಡಿಸುವ ಪ್ರಾತ್ಯಕ್ಷಿಕೆ ನೀಡಿದರು.

ಡಾ. ಕೆ.ಎಸ್. ಶರ್ಮಾ ಅವರ ಜನ್ಮದಿನಾಚರಣೆ ನಿಮಿತ್ತ ಅವರ ಚಿಂತನ-ಮಂಥನದ ಒಂಬತ್ತು ಸಂಪುಟಗಳ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆ ವಿಶ್ಲೇಷಣೆಯ ದಾಖಲೆ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಹಾವಿದ್ಯಾಲಯದ ಮುಖ್ಯ ಆಡಳಿತಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ, ಕಾರ್ಯದಶಿರ್ ಡಾ. ಸೋಮಶೇಖರ್ ಹುದ್ದಾರ, ಪ್ರಾಂಶುಪಾಲ ಡಾ. ಚರಂತಯ್ಯ ಹಿರೇಮಠ, ಪ್ರೊ. ರವೀಂದ್ರ ಶಿರಳ್ಕೋರ್, ಡಾ. ದೇಸಾಯಿ, ಸಂಜಯ ತ್ರಾಸದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net