

ತುಮಕೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿ ಇರುವುದರಿಂದ ಜಿಲ್ಲೆಯ ರೈತರು ಬೆಳೆದಿರುವ ಕರಬೂಜ, ಕಲ್ಲಂಗಡಿ, ಟೊಮೆಟೊ ಹಾಗೂ ಪಪ್ಪಾಯಿ ಹಣ್ಣುಗಳನ್ನು ಹಾಪ್‌ಕಾಮ್ಸ್ ಹಾಗೂ ವರ್ತಕರನ್ನು ಲಿಂಕ್ ಮಾಡುವ ಮೂಲಕ ಖರೀದಿಗೆ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಕ್ರಮ ಕೈಗೊಂಡಿದ್ದು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲೆಗೆ ಅಗತ್ಯವಿರುವಷ್ಟು ಹಣ್ಣು, ತರಕಾರಿಯನ್ನು ಜಿಲ್ಲೆಯಲ್ಲೇ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಉಳಿದಂತೆ ಚಿತ್ರದುರ್ಗ, ಬೆಂಗಳೂರು ಜಿಲ್ಲೆಗಳಿಗೆ ಕಳುಹಿಸಲು ಹಾಗೂ ನೆರೆಯ ರಾಜ್ಯದ ಅನಂತಪುರದ ವ್ಯಾಪಾರಸ್ಥ ರನ್ನು ಲಿಂಕ್ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳನ್ನು ಎಪಿಎಂಸಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ ಮನೆಮನೆಗೆ ಹಾಪ್‌ಕಾಮ್ಸ್ ಮೂಲಕ ಹಣ್ಣು, ತರಕಾರಿ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ರೈತರು ತಾವು ಬೆಳೆದ ಬೆಳೆಯನ್ನು ಯಾವುದೇ ಕಾರಣಕ್ಕೂ ಎಲ್ಲೆಂದರೆಲ್ಲ ಎಸೆಯದೆ ಹಾಪ್‌ಕಾಮ್ಸ್ ಮೂಲಕ ಮಾರಾಟ ಮಾಡಿ ಎಂದು ಮನವಿ ಮಾಡಿದರು.
2 ನಿರಾಶ್ರಿತ ಕೇಂದ್ರ : ರಾಜ್ಯಾದ್ಯಂತ ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ನಿರಾಶ್ರಿತರು ಹಾಗೂ ವಲಸೆ ಕಾರ್ಮಿಕರಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಜಿಲ್ಲಾಡಳಿತದ ವತಿಯಿಂದ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹೇಳಿದರು. ತುಮಕೂರಿನಲ್ಲಿ 2 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ 122 ಜನರು ಇದ್ದು, ಅವರಿಗೆ ಊಟ ವಸತಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 1506 ವಲಸೆ ಕಾರ್ಮಿಕರನ್ನು ಗುರುತಿಸಿದ್ದು, ಸಂಬಂಧಿಸಿದ ಗುತ್ತಿಗೆದಾರರುಗಳ ಮೂಲಕ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೈಗೆ ಬಂದ ಬೆಳೆ !: ಗುಬ್ಬಿ ತಾಲೂಕು ಚೇಳೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಾಳೆ ತೋಟದಲ್ಲಿ ಉತ್ತಮ ಫಸಲು ಬಂದಿದೆ. ಆದರೆ, ಮಾರುಕಟ್ಟೆಗೆ ತಲುಪಿಸಲಾಗದೆ ಕಟಾವಿಗೆ ಬಂದಿರುವ ಬಾಳೆಗೊನೆ ಮಾರಲಿಕ್ಕಾಗದೆ ರೈತರು ನಷ್ಟಕ್ಕೆ ಗುರಿಯಾಗಿದ್ದಾರೆ. ಪ್ರತಿದಿನ 10-20 ಟನ್ ಬಾಳೆಕಾಯಿಯನ್ನು ತುಮಕೂರು ಹಾಗೂ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿತ್ತು. ಆದರೆ. ಈಗ ಚೇಳೂರು ಮಾರಕಟ್ಟೆ ಬಂದ್ ಆಗಿದೆ. ಇನ್ನೂ ತುಮಕೂರಿಗೆ ಕಳುಹಿಸಲಾಗುತ್ತಿಲ್ಲ ಎನ್ನುತ್ತಾರೆ ಲಿಂಗಾಪುರದ ರೈತ ಸಿದ್ದರಾಜು.