

ರಾಯಚೂರು ಜಿಲ್ಲೆಯಲ್ಲಿ ದಾಸಸಾಹಿತ್ಯ ಪರಂಪರೆಯನ್ನು ಬೆಳೆಸುವಲ್ಲಿ ಜಯಲಕ್ಷ್ಮೀ ಮಂಗಳಮೂರ್ತಿ ಅಗ್ರಗಣ್ಯರಾಗಿದ್ದು, ಅವರು ನುಡಿದಿದ್ದೆಲ್ಲಾ ಅಮೃತವಾಣಿಯಾಗಿದ್ದು, ದಾಸ ಚಿಂತನೆಯನ್ನು ಜೀವನ ಸೌಂದರ್ಯವನ್ನಾಗಿಸಿಕೊಂಡು, ದಾಸ ಕೀರ್ತನೆಯನ್ನು ಸ್ವರಮಾಧುರ್ಯ್ಯವನ್ನಾಗಿಸಿಕೊಂಡಿದ್ದಾರೆಂದು ಅಂತರಾಷ್ಟ್ರೀಯ ದಾಸವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥ ಸಾರಥಿ ಅಭಿಪ್ರಾಯಪಟ್ಟರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ದಾಸೋತ್ಸವ ಸಮಿತಿ ಮತ್ತು ಜಯದೀಪ್ತಿ ಅಭಿನಂದನಾ ಸಮಿತಿಯಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಜಯಲಕ್ಷ್ಮೀ ಮಂಗಳಮೂರ್ತಿಯವರ ಜಯದೀಪ್ತಿ ಅಭಿನಂದನಾ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿ, ವಿಶಿಷ್ಟ ಕಾವ್ಯ, ವಿಶಿಷ್ಟ ಚಿಂತನೆಗಳನ್ನು ಹಾಗೂ ವೇದ ಉಪನಿಷತ್ತುಗಳನ್ನು ಪಂಕ್ತಿಯೊಳಗೆ ಜೋಡಿಸುವ ಶ್ರೇಷ್ಠ ಕೆಲಸವನ್ನು ಮಾಡಿದ್ದಾರೆ. ದಾಸಸಾಹಿತ್ಯದ ಮಹಿಳಾ ಸಾಹಿತಿಗಳ ಸಾಲಿನಲ್ಲಿ ಶ್ರೇಷ್ಠ ಸಾಲಿನಲ್ಲಿದ್ದಾರೆ. ಕಾರ್ಪರದ ಋಷಿಯ ಅಜ್ಜ ಹಚ್ಚಿದ ಜ್ಯೋತಿಯಾಗಿದ್ದಾರೆ. ಆಚಾರ್ಯ ಪರಂಪರೆಗೆ ಜಯ ತಂದಿರುವ ಮಂಗಳದ ಮೂರ್ತಿಯಾಗಿದ್ದಾರೆ ಎಂದರು.
ಸಂಸದ ಜಿ.ಕುಮಾರ ನಾಯಕ ಮಾತನಾಡಿ, ತಮ್ಮ ಇಡೀ ಜೀವನದುದ್ದಕ್ಕೂ ದಾಸಸಾಹಿತ್ಯದ ಇಡೀ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸುವ ಜವಾಬ್ದಾರಿಯನ್ನು ಜಯಲಕ್ಷ್ಮೀ ಮಂಗಳಮೂರ್ತಿಯವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರನ್ನು ಸನ್ಮಾನಿಸಿದರೇ ಇಡೀ ಜಿಲ್ಲೆಯನ್ನೇ ಸನ್ಮಾನಿಸಿದಂತಾಗುತ್ತದೆ. ಭಕ್ತಿ ಮಾರ್ಗವೆಂಬುವುದು ಶ್ರೇಷ್ಠವಾದದ್ದು, ಭಕ್ತಿ ಪರಂಪರೆ ನಶಿಸಲು ಸಾಧ್ಯವಿಲ್ಲ. ಮನುಷ್ಯ ಮತ್ತು ಭಗವಂತ ಇರುವವಗರೆಗೂ ಭಕ್ತಿ ಪರಂಪರೆ ಇದ್ದೇ ಇರುತ್ತದೆ ಎಂದು ತಿಳಿಸಿದರು.
ನಗರ ಶಾಸಕ ಡಾ,ಶಿವರಾಜ್ ಪಾಟೀಲ್ ಮಾತನಾಡಿ, ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಲು ಇಂದು ಗ್ರಂಥವನ್ನು ಹೊರತರಲಾಗಿದ್ದು, ಆದರೆ ವಾಸ್ತವವಾಗಿ ಜಯಲಕ್ಷ್ಮೀ ಅವರೇ ಒಂದು ದೊಡ್ಡ ಗ್ರಂಥವಾಗಿದ್ದು, ಅವರಲ್ಲಿ ದಾಸಸಾಹಿತ್ಯದ ಬಗ್ಗೆ ಅಷ್ಟು ದೊಡ್ಡ ಜ್ಞಾನ ಅಡಗಿದೆ. ಜಯಲಕ್ಷ್ಮೀ ಮಂಗಳಮೂರ್ತಿಯವರು ಕೇವಲ ಜಿಲ್ಲೆ ಮತ್ತು ವಿಪ್ರ ಸಮಾಜಕ್ಕೆ ಮಾತ್ರವಲ್ಲ ಅವರು ಇಡೀ ದೇಶಕ್ಕೆ ಮಾದರಿಯಾಗಿದ್ದು, ಅವರ ಚಿಂತನೆಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡ ರವಿ ಬೋಸರಾಜು, ಪಾಲಿಕೆ ಪ್ರಭಾರ ಅಧ್ಯಕ್ಷ ಸಾಜೀದ್ ಸಮೀರ್, ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ದಾಸೋತ್ಸವ ಸಮಿತಿ ಅಧ್ಯಕ್ಷ ವೆಂಕಟರಾವ ಕುಲಕರ್ಣಿ, ಡಾ.ಜಯಲಕ್ಷ್ಮೀ ಮಂಗಳಮೂರ್ತಿ, ಪರಿಮಳ ,ಪಾಲಿಕೆ ಸದಸ್ಯ ಜಯಣ್ಣ, ನರಸಿಂಗ್‌ರಾವ್ ದೇಶಪಾಂಡೆ, ಜಗನ್ನಾಥ ಕುಲಕರ್ಣಿ, ಹರೀಶ ಆಚಾರ ಕೊಪ್ಪರ, ಹನುಮಂತರಾವ ಕಲ್ಲೂರಕರ್, ಪಂ.ನರಸಿಂಹಲು ವಡವಾಟಿ, ದಾನಪ್ಪ ಯಾದವ್, ಅರವಿಂದ ಕುಲಕರ್ಣಿ, ರಮೇಶ ಕುಲಕರ್ಣಿ, ರಂಗಣ್ಣಪಾಟೀಲ್ ಅಳ್ಳುಂಡಿ, ಡಾ.ಪ್ರಮೋದ್ ಕಟ್ಟಿ, ವೀರಹನುಮಾನ, ವೆಂಕಟೇಶ ಬೇವಿನಬೆಂಚಿ, ವಿಷ್ಣುತೀರ್ಥ ಸಿರವಾರ್, ಡಾ.ಲಕ್ಷ್ಮೀಕಾಂತ.ವಿ.ಮೋಹರೀರ, ಮಹ್ಮದ್ ಸೇರಿ ಅನೇಕರು ಇದ್ದರು.