

ಮದ್ದೂರು: ಪಟ್ಟಣದ ಕೇಂಬ್ರಿಡ್ಜ್ ಶಾಲೆಯ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಸಾಹಿತಿಗಳಾದ ದಿವಂಗತ ಡಾ.ಜಯಲಕ್ಷ್ಮೀ ಸೀತಾಪುರ ಹಾಗೂ ಡಾ.ಕಮಲಾ ಹಂಪನಾ ಅವರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.
ಸಾಹಿತಿ ಜಿ.ಟಿ.ವೀರಪ್ಪ ಮಾತನಾಡಿ, ಡಾ.ಜಯಲಕ್ಷ್ಮೀ ಸೀತಾಪುರ ಅವರು ಜನಪದ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅಲ್ಲದೆ ಜಾನಪದ ಕಲೆಯ ಉಳಿವು ಮತ್ತು ಬೆಳವಣಿಗೆಗಾಗಿ ಅವಿರತವಾಗಿ ದುಡಿದಿದ್ದಾರೆ ಎಂದು ಸ್ಮರಿಸಿದರು.
ಸಾಹಿತಿ ಧರಣೇಂದ್ರಯ್ಯ ಮಾತನಾಡಿ, ಡಾ.ಕಮಲಾ ಹಂಪನಾ ಅವರು ಕನ್ನಡ ಸಾಹಿತ್ಯ ಕಂಡ ಅತ್ಯದ್ಭುತ ಸಾಹಿತಿ. ಇವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಇವರ ಸಾಹಿತ್ಯ ಕೃಷಿಯಿಂದ ಕನ್ನಡ ಸಾಹಿತ್ಯವು ಮತ್ತಷ್ಟು ಶ್ರೀಮಂತಗೊಂಡಿದೆ. ಹೆಣ್ಣು ಮಕ್ಕಳ ಧ್ವನಿಯಾಗಿ ಸಮಾಜದಲ್ಲಿ ಶ್ರಮಿಸಿದ್ದಾರೆ. ಇವರು ಅಂತರ್ಜಾತಿ ವಿವಾಹವಾಗುವುದರ ಮೂಲಕ 1950ರ ದಶಕದಲ್ಲಿ ಸಮಾಜದ ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಅಪೂರ್ವಚಂದ್ರ ಅವರು ಡಾ.ಜಯಲಕ್ಷ್ಮೀ ಸೀತಾಪುರ ಹಾಗೂ ಕಮಲಾ ಹಂಪನಾ ಅವರ ಸಾಧನೆಯನ್ನು ಮೆಲುಕು ಹಾಕಿದರು.
ಕೇಂಬ್ರಿಡ್ಜ್ ಶಾಲೆಯ ಕಾರ್ಯದರ್ಶಿ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮದ್ದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಣಸಾಲೆ ಸುನಿಲ್‌ಕುಮಾರ್, ಡಾ.ಈರಯ್ಯ, ಶ್ರೀಧರ್, ಶೌಕತ್ ಆಲಿ, ಶಾಲೆಯ ಮುಖ್ಯಶಿಕ್ಷಕ ರವಿ ನಾರಾಯಣ್, ಸಹ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.