ವಿಶ್ವವ್ಯಾಪಿಯಾಗಲಿ ವಚನಕಾರರ ತತ್ವಚಿಂತನೆ

Oplus_131072
ಬಸವಕಲ್ಯಾಣದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಡಾ.ವಿಕ್ರಮ ವಿಸಾಜಿ ಅವರಿಗೆ ಡಾ.ಜಯದೇವಿತಾಯಿ ಲಿಗಾಡೆ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು. ಪ್ರೊ.ಎಚ್.ಟಿ.ಪೋತೆ, ಬಸವರಾಜ ಕೊನೇಕ್, ಡಾ.ಶ್ರೀಶೈಲ ನಾಗರಾಳ, ಡಾ.ರವೀಂದ್ರನಾಥ, ಪ್ರೇಮಸಾಗರ ಪಾಟೀಲ್, ಡಾ.ಭೀಮಾಶಂಕರ ಬಿರಾದಾರ, ಡಾ.ಶಿವಾಜಿ ಮೇತ್ರೆ, ಶ್ರೀಶೈಲ್ ಹುಡೇದ, ದೇವೇಂದ್ರ ಬರಗಾಲೆ ಇದ್ದರು.
Published on

ಬಸವಕಲ್ಯಾಣ: ಕಲ್ಯಾಣಕ್ಕೆ ಚಾರಿತ್ರಿಕ, ಸಾಂಸ್ಕೃತಿಕ ಹಿನ್ನೆಲೆ ಜತೆಗೆ ವಚನ, ತತ್ವಪದ ಮತ್ತು ಸೂಫಿ ಸ್ಪರ್ಶವಿದೆ. ಹೀಗಾಗಿ ಕಲ್ಯಾಣ ವಾಚಿಕೆ ಕೃತಿ ಬರಬೇಕು ಎಂದು ಹಿರಿಯ ಚಿಂತಕ ಕಲಬುರಗಿಯ ಪ್ರೊ.ಎಚ್.ಟಿ. ಪೋತೆ ಹೇಳಿದರು.

ಡಾ.ಜಯದೇವಿತಾಯಿ ಲಿಗಾಡೆ ಜನ್ಮದಿನ ನಿಮಿತ್ತ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಶಾಂತಿನಿಕೇತನ ಶಾಲೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಡಾ.ಜಯದೇವಿತಾಯಿ ಲಿಗಾಡೆ ಗೌರವ ಪುರಸ್ಕಾರ ಪ್ರದಾನ ಹಾಗೂ ಶಿವಾಜಿ ಮೇತ್ರೆ ಅವರ ಡಾ.ಜಯದೇವಿತಾಯಿ ಲಿಗಾಡೆ ವಾಚಿಕೆ ಹಾಗೂ ಡಾ.ಭೀಮಾಶಂಕರ ಬಿರಾದಾರರ ದೇಶಾಂಶ ಹುಡುಗಿ ವಾಚಿಕೆ ಬಿಡುಗಡೆ ಮಾಡಿದ ಅವರು, ಆಧುನಿಕ ಕಾಲದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಭಾವ ಜಗತ್ತಿಗೆ ಆವರಿಸಿದೆ. ಬಸವಣ್ಣ ಮತ್ತು ವಚನಕಾರರ ತತ್ವ ಚಿಂತನೆ ವಿಶ್ವವ್ಯಾಪಿಯಾಗಿಸಲು ದಾರಿ ಹುಡುಕುವ ಅಗತ್ಯವಿದೆ ಎಂದರು.

ಡಾ.ಜಯದೇವಿತಾಯಿ ಲಿಗಾಡೆ ಹಾಗೂ ದೇಶಾಂಶ ಹುಡುಗಿ ಈ ನೆಲದಲ್ಲಿ ಕನ್ನಡ ಮತ್ತು ಕನ್ನಡತ್ವವನ್ನು ತಮ್ಮ ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಎರಡು ವಾಚಕೆಗಳು ಅವರ ಬರಹಗಳ ಬಿಂಬವನ್ನು ಇಬ್ಬರು ಸಂಪಾದಕರು ಕಟ್ಟಿಕೊಟ್ಟಿದ್ದಾರೆ. ಈ ವಾಚಿಕೆಗಳ ಮೂಲಕ ಅವರ ಒಟ್ಟು ಸಾಹಿತ್ಯದ ಅಧ್ಯಯನಕ್ಕೆ ಓದುಗರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಬಿಡುಗಡೆಯಾದ ಕೃತಿಗಳ ಕುರಿತು ಸಿಯುಕೆ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಮಾತನಾಡಿ, ಮುಖ್ಯ ಲೇಖಕರು ಸಾಹಿತ್ಯದ ಹಲವು ಪ್ರಕಾರಗಳನ್ನು ಬರೆದಿರುತ್ತಾರೆ. ಅವರ ಸಾಹಿತ್ಯದ ಕುರಿತು ಆಸಕ್ತಿ ಬೆಳೆಸಲು ವಾಚಿಕೆಗಳಿಂದ ಸಾಧ್ಯ. ಸಣ್ಣ ಸಣ್ಣ ವಾಚಿಕೆ ಓದುತ್ತ ಪ್ರಧಾನ ಲೇಖಕರ ಸಮಗ್ರ ಸಾಹಿತ್ಯದ ಕಡೆ ಹೋಗಬೇಕು. ವಾಚಿಕೆ ಎಂಬುದು ಪಾಶ್ಚಿಮಾತ್ಯದ ರೀಡರ್​್ಸ ರೂಪ ಎಂದು ಹೇಳಿದರು.

ಕಲಬುರಗಿ ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ ಕೊನೇಕ್ ಮಾತನಾಡಿ, ಈ ಭಾಗದ ಹಿರಿಯ ಲೇಖಕರ ಬರಹ ಕುರಿತು ಕಿರಿಯರು ಬರೆದಿರುವ ಲೇಖನಗಳನ್ನೇ ವಾಚಿಕೆ ರೂಪದಲ್ಲಿ ಹೊರತರಲಾಗಿದೆ. ಒಬ್ಬ ಪ್ರಸಿದ್ಧ ಲೇಖಕನ ಒಟ್ಟು ಬರಹದ ಹಲವು ಭಾಗ ಓದುಗರಿಗೆ ತಲುಪಿಸುವ ಉದ್ದೇಶ ನಮ್ಮದು. ಕಲ್ಯಾಣ ವಾಚಿಕೆ ಡಿಸೆಂಬರ್‌ನಲ್ಲಿ ಪ್ರಕಟಿಸುವ ಯೋಚನೆ ಹೊಂದಿರುವುದಾಗಿ ತಿಳಿಸಿದರು.

ಹಿರಿಯ ಸಾಹಿತಿ ಡಾ.ಶ್ರೀಶೈಲ್ ನಾಗರಾಳ ಮಾತನಾಡಿ, ಸಿದ್ಧö್ದಲಿಂಗೇಶ್ವರ ಪ್ರಕಾಶನ ಮಹತ್ವದ ಪುಸ್ತಕ ಪ್ರಕಟಿಸಿ ನಾಡಿನ ಗಮನ ಸೆಳೆದಿದೆ ಎಂದು ಕೊಂಡಾಡಿದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರವೀಂದ್ರನಾಥ ನಾರಾಯಣಪುರ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಹುಡೇದ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಸಿ.ಬಿ. ಪರತಾಪುರೆ, ಬಿಕೆಇಸಿ ರಿಜಿಸ್ಟ್ರಾರ್ ಪ್ರೇಮಸಾಗರ ಪಾಟೀಲ್, ಸಂಜುಕುಮಾರ ನಡುಕರ, ಓಂನಾಥ ಇಂಡೆ ಅವರಿಗೆ ಕೃತಿಗಳನ್ನು ನೀಡುವ ಮೂಲಕ ಡಾ.ಪೋತೆ ಲೋಕಾರ್ಪಣೆ ಮಾಡಿದರು.

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಅವರಿಗೆ ೨೦೨೪ರ ಡಾ.ಜಯದೇವಿತಾಯಿ ಲಿಗಾಡೆ ಗೌರವ ಪುರಸ್ಕಾರ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಡಾ.ಭೀಮಾಶಂಕರ ಬಿರಾದಾರ ಸ್ವಾಗತಿಸಿದರು. ಡಾ.ಶಿವಾಜಿ ಮೇತ್ರೆ ವಂದಿಸಿದರು. ದೇವೇಂದ್ರ ಬರಗಾಲೆ ನಿರೂಪಣೆ ಮಾಡಿದರು.

ಇತ್ತೀಚೆಗೆ ಅಗಲಿದ ಹಿರಿಯ ಚಿಂತಕ, ಲೇಖಕ, ಸರೋದವಾದಕ ಡಾ.ರಾಜೀವ್ ತಾರನಾಥ ಹಾಗೂ ಹಿರಿಯ ಲೇಖಕಿ ಡಾ.ಕಮಲಾ ಹಂಪನಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಡಾ.ಜಯದೇವಿತಾಯಿ ಲಿಗಾಡೆ ಹಾಗೂ ದೇಶಾಂಶ ಹುಡುಗಿ ಈ ನೆಲದಲ್ಲಿ ಕನ್ನಡ ಮತ್ತು ಕನ್ನಡತ್ವವನ್ನು ತಮ್ಮ ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ವಾಚಿಕೆಗಳ ಮೂಲಕ ಅವರ ಒಟ್ಟು ಸಾಹಿತ್ಯದ ಅಧ್ಯಯನಕ್ಕೆ ಓದುಗರು ಪ್ರವೇಶಿಸಬೇಕು.
| ಪ್ರೊ.ಎಚ್.ಟಿ.ಪೋತೆ ಹಿರಿಯ ಚಿಂತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net