ಡಾ. ನಾಗಯ್ಯ ಸಮಚಿತ್ತದ ಸಂಶೋಧಕರು

14 DWD 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಾಸನಶಾಸ್ತ್ರ, ಹಳೆಗನ್ನಡ ಸಾಹಿತ್ಯ, ಗ್ರಂಥ ಸಂಪಾದನೆ, ಹಸ್ತಪ್ರತಿಶಾಸ್ತ್ರ ಹಿತ್ಯವೂ ಸೇರಿ ಕನ್ನಡ ಸಾಹಿತ್ಯದ ವಿವಿಧ ಕ್ಷೇತ್ರಗಳ ನೈತಿಕ ನೆಲೆಯ ಗುಣಮಟ್ಟದ ಸಂಶೋಧನೆಯಲ್ಲಿ ಡಾ. ಜೆ.ಎಂ. ನಾಗಯ್ಯ ಸಮಚಿತ್ತದ ಸಂಶೋಧಕರು ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಹಂಪಿ ಕನ್ನಡ ವಿ.ವಿ. ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘ, ಹುಬ್ಬಳ್ಳಿಯ ಡಾ. ಜೆ.ಎಂ. ನಾಗಯ್ಯ ಟ್ರಸ್ಟ್ ಹಾಗೂ ಹೂವಿನಹಡಗಲಿಯ ಡಾ. ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜಿನ ಆಶ್ರಯದಲ್ಲಿ ಕವಿವ ಸಂಘದ ಡಾ. ಪಾಪು ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ವಿದ್ವಾಂಸ, ಸಂಶೋಧಕ, ವಿಶ್ರಾಂತ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ ಅವರ ಸಾಹಿತ್ಯಾವಲೋಕನ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಡಾ. ಶ್ಯಾಮಸುಂದರ ಕೋಚೆ ಮಾತನಾಡಿ, ಸಂಶೋಧನೆಯ ವಿಚಾರಗಳನ್ನು ತಳಸ್ಪರ್ಶಿಯಾಗಿ ತಾರ್ಕಿಕ ಅಂತ್ಯ ಕಾಣುವವರೆಗೆ ಅಧ್ಯಯನಕ್ಕೆ ಒಳಪಡಿಸುವ ಅಗತ್ಯವಿದೆ. ತಮ್ಮ ಸಂಶೋಧನಾ ದಿಕ್ಕಿನಲ್ಲಿ ಅದಕ್ಕೆ ಪೂರಕ ಆಕರಗಳನ್ನು ಸೃಷ್ಟಿಸದೆ ಲಭ್ಯವಾಗುವ ಆಕರಗಳ ಅಧ್ಯಯನದ ಫಲಿತಗಳು ಸಂಶೋಧನೆಯ ವಿಶ್ಲೇಷಣೆಯಲ್ಲಿ ಒಳಗೊಂಡಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಶೋಧನಾ ಕ್ಷೇತ್ರದ ಆಳವಾದ ಅಧ್ಯಯನದ ನೆಲೆ ಹೊಂದಿರುವ ಡಾ. ನಾಗಯ್ಯ ಅವರ ಸಂಶೋಧನಾ ಸಂಗತಿಗಳು ಗಮನಸೆಳೆಯುತ್ತವೆ ಎಂದರು.

ಬ0ಡಿವಾಡ ಗಿರೀಶ ಆಶ್ರಮದ ಡಾ. ಎ.ಸಿ. ವಾಲಿ ಗುರೂಜಿ, ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಮಾಜಿ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಹಾಗೂ ಪ್ರಾಧ್ಯಾಪಕ ಡಾ. ಕಲ್ಲಯ್ಯ ಹಿರೇಮಠ ಮಾತನಾಡಿದರು.

ಮಾಜಿ ಶಾಸಕ ಚಂದ್ರಕಾ0ತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಎಸ್. ದೊಡಮನಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ರೆಹಮಾನ ಗೊರಜನಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net