

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ 2024ನೇ ಸಾಲಿನ ‘ಇಂದಿರಾರತ್ನ ಪ್ರಶಸ್ತಿ’ಗೆ ಕನ್ನಡ ಪರ ಹೋರಾಟಗಾರ್ತಿ ಹಾಗೂ ಅನುವಾದಕಿ ಡಾ. ಕೆ.ಮಲರ್ ವಿಳಿ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 5 ಸಾವಿರ ರೂ. ನಗದು ಹಾಗೂ ಸ್ಮರಣಫಲಕ ಒಳಗೊಂಡಿರುತ್ತದೆ. ಕನ್ನಡ ಪರ ಹೋರಾಟ, ಚಳವಳಿಗಳಲ್ಲಿ ತೊಡಗಿಸಿಕೊಂಡು ಲೇಖಕಿಯೂ ಆಗಿರುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ನ.27ರಂದು ಸೌತ್ ಎಂಡ್ ಸರ್ಕಲ್‌ನಲ್ಲಿರುವ ಸುರಾನಾ ಕಾಲೇಜಿನಲ್ಲಿ ನಡೆಯಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜನಪದ ಗಾಯಕಿ ಸವಿತಕ್ಕ ಉಪಸ್ಥಿತರಿರುತ್ತಾರೆ.
ಪ್ರಸಿದ್ಧ ಅನುವಾದಕರಾಗಿರುವ ಡಾ. ಕೆ.ಮಲರ್ ವಿಳಿ ಕಾಲೇಜು ಮತ್ತಿತರ ಕಡೆ ಕನ್ನಡ ಸಂಘಗಳನ್ನು ಕಟ್ಟಿ ಕನ್ನಡ ಭಾಷೆಯನ್ನು ಪ್ರಚುರಪಡಿಸುತ್ತಿದ್ದಾರೆ. ಅಲ್ಲದೆ ಸಾಕಷ್ಟು ಪುಸ್ತಕಗಳನ್ನು ಕನ್ನಡದಿಂದ ತಮಿಳಿಗೆ ಹಾಗೂ ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಈ ಎಲ್ಲ ಚಟುವಟಿಕೆ ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷೆ ಡಾ. ಎಚ್.ಎಲ್.ಪುಷ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.