ಡಾ. ಮಂಜುನಾಥಗೆ ಹಂಡಿಗಿ ಪ್ರತಿಷ್ಠಾನ ಪ್ರಶಸ್ತಿ,  ಹುಬ್ಬಳ್ಳಿಯಲ್ಲಿ 8ರಂದು ಪ್ರದಾನ

Published on

ಹುಬ್ಬಳ್ಳಿ: ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ವತಿಯಿಂದ ಕೊಡಮಾಡುವ ಸಂಗಮ ಸಿರಿ ರಾಜ್ಯ ಮಟ್ಟದ ಪ್ರಶಸ್ತಿಗೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಶಿವರ ಗ್ರಾಮದ ಡಾ. ಎಸ್.ಕೆ. ಮಂಜುನಾಥ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ. ಗೌಡಪ್ಪಗೋಳ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 8ರಂದು ಬೆಳಗ್ಗೆ 10.30ಕ್ಕೆ ಅಕ್ಷಯ ಪಾರ್ಕ್ ಬೆಟ್ ಬಿಜಿನೆಸ್ ಸ್ಕೂಲ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. ಪ್ರತಿಷ್ಠಾನದಿಂದ 2022ರಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈಗಾಗಲೇ ಸಂಶೋಧನೆ, ವಚನ ಸಾಹಿತ್ಯಕ್ಕೆ ಈ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಕಾವ್ಯ ರಚನೆಗಾಗಿ ಮಂಜುನಾಥ ಅವರಿಗೆ ನೀಡಲಾಗುತ್ತಿದೆ ಎಂದರು.

ಪ್ರತಿಷ್ಠಾನದಿಂದ ನೀಡಿದ್ದ ಆಹ್ವಾನಕ್ಕೆ ಸ್ಪಂದಿಸಿ ಪ್ರಶಸ್ತಿಗಾಗಿ ಸುಮಾರು 80 ಕೃತಿಗಳು ಬಂದಿದ್ದವು. ಇದರಲ್ಲಿ ಡಾ. ಮಂಜುನಾಥ ಅವರ "ಗಾಳಿಯ ಎದೆ ಸೀಳಿ ಹೊರಟ ಹಕ್ಕಿ' ಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದರು.

ಈ ಪ್ರಶಸ್ತಿಯು 10 ಸಾವಿರ ರೂ. ನಗದು, ಫಲಕ ಒಳಗೊಂಡಿದೆ. ಕೃತಿಯ ಕುರಿತು ಸಾಹಿತಿ ಮಹಾಂತಪ್ಪ ನಂದೂರ ಮಾತನಾಡಲಿದ್ದಾರೆ. ಶಿರೋಳ ತೋಂಟದಾರ್ಯಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಅತಿಥಿಗಳಾಗಿ ಬೆಟ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಲ್. ಲಿಂಗಶೆಟ್ಟರ, ಪತ್ರಕರ್ತ ಗಣಪತಿ ಗಂಗೊಳ್ಳಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸತರಾದ ಐ.ಎಂ. ವಲ್ಲೆಪ್ಪನವರ, ಜಾನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಡಾ. ರಾಮು ಮೂಲಗಿ, ನಟ ಜೆ.ಜಿ. ಸಂಸ್ಥಾನಮಠ, ಕಲಾವಿದ ಗೋಪಾಲ ಮನುವಾಚಾರ್ಯ, ಸ್ಕೇಟಿಂಗ್ ಪಟು ಸ್ತುತಿ ಕುಲಕರ್ಣಿ ಅವರನ್ನು ಗೌರವಿಸಲಾಗುವುದು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವೀರೇಶ ಹಂಡಿಗಿ, ಸಹ ಕಾರ್ಯದರ್ಶಿ ರವೀಂದ್ರ ರಾಮದುರ್ಗಕರ, ಡಾ. ಬಿ.ಎಸ್. ಮಾಳವಾಡ, ಬಿ.ಎಲ್. ಲಿಂಗಶೆಟ್ಟರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net