

ಮಂಡ್ಯ: ಸಂಘ ಸಂಸ್ಥೆಗಳಿಂದ ಕೊಡಲಾಗುವ ಪ್ರಶಸ್ತಿ ಪುರಸ್ಕಾರಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಭಾಷಾ ವಿಜ್ಞಾನಿ ಡಾ.ಸೋಮಶೇಖರಗೌಡ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 11ನೇ ವರ್ಷದ ಡಾ.ಹಾಮಾನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಡಾ.ಹಾಮಾನಾ ಪ್ರಶಸ್ತಿ ಸಿಕ್ಕಿರುವುದೇ ನನ್ನ ಸೌಭಾಗ್ಯ. ಇದರಿಂದ ನನಗೆ ಮತ್ತಷ್ಟು ಸೇವೆ ಮಾಡುವ ಮನೋಭಾ ಹೆಚ್ಚಿದೆ ಎಂದರು.
ಕರ್ನಾಟಕ ಸಂಘ ಪ್ರಶಸ್ತಿ ನೀಡುವ ತವರೂರಾಗಿದೆ. ಪ್ರೊ.ಬಿ.ಜಯಪ್ರಕಾಶಗೌಡ ಅವರು ಕೂಡ ಸಾಂಸ್ಕೃತಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲೆಮರೆಕಾಯಿಯಂತಿರುವ ಸಾಧಕರನ್ನು ಹುಡುಕಿ ಗೌರವ ನೀಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಕರ್ನಾಟಕ ಸಂಘದ ಮಜಲುಗಳು ಮತ್ತು ಕಾರ್ಯವೈಖರಿಯನ್ನು ಮುದ್ದೇಗೌಡ ಅವರು ಕಣ್ಣಿಗೆ ಚಿತ್ರಣ ಕೊಟ್ಟಹಾಗೆ ಕಟ್ಟಿಕೊಟ್ಟರು. ಈ ಸಂಘದ ರೂವಾರಿ ಮತ್ತು ಶಕ್ತಿಯನ್ನು ನಾವು ನೋಡಿದ್ದೇವೆ. ಪ್ರಶಸ್ತಿ ನೀಡುವ ಮೂಲಕ ಎಲ್ಲರನ್ನೂ ಗುರುತಿಸುವ ಕೆಲಸ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದು ಎಂದರು.
ಜಯಪ್ರಕಾಶಗೌಡ ಅವರು ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ. ಗಡಿಗಳ ಆಚೆಗಿನ ಪ್ರೀತಿ ಎಂಬುವ ಲೇಖನವನ್ನು ಬರೆದುಕೊಟ್ಟಿದ್ದೆ. ಜೆಪಿ ಅವರಿಗೂ ನಮಗೂ ಒಂದು ರೀತಿಯ ಮಾನಸಿಕ ದೂರವಿದ್ದರೂ ಕೂಡ ನಾವು ಎಂದಿಗೂ ಅದನ್ನು ಮುಂದುವರಿಸದೇ ಮತ್ತೆ ಒಟ್ಟುಗೂಡಿ ಹೋಗುತ್ತಿದ್ದೇವೆ. ಇವರ ದೂರದೃಷ್ಟಿಯು ಕರ್ನಾಟಕ ಸಂಘವನ್ನು ಬಹು ಎತ್ತರಕ್ಕೆ ಬೆಳೆಸಿದೆ. ಇವರು ಮಂಡ್ಯದ ಸಾಂಸ್ಕೃತಿಕ ರಾಯಭಾರಿಯೂ ಹೌದು ಎಂದು ಶ್ಲಾಘಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪ್ರಾಧ್ಯಾಪಕ ಪಿ.ಬೆಟ್ಟೇಗೌಡ, ಕೆನರಾ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಎಸ್.ಟಿ.ರಾಮಚಂದ್ರ, ಸಂಘದ ಉಪಾಧ್ಯಕ್ಷ ಎಚ್.ಎಸ್.ಮುದ್ದೇಗೌಡ, ಅನಿತಾ ಮಂಗಲ, ಲೋಕೇಶ್ ಚಂದಗಾಲು ಇದ್ದರು.
ಸಾಧಕರಿಗೆ ಪ್ರಶಸ್ತಿಯ ಗೌರವ
ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿಯ ಸೋಮೇಗೌಡ-ಸಣ್ಣತಾಯಮ್ಮ ದಂಪತಿ ಪುತ್ರ ಡಾ.ಸೋಮಶೇಖರಗೌಡ ಅವರಿಗೆ ‘ಡಾ. ಹಾಮಾನ ಭಾಷಾ ವಿಜ್ಞಾನ ಹಿರಿಯ ಪ್ರಶಸ್ತಿ’ ಜತೆಗೆ 50 ಸಾವಿರ ರೂ ನಗದನ್ನು ನೀಡಲಾಯಿತು. ಅಂತೆಯೇ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಆಲಕೆರೆ ಅಗ್ರಹಾರ ಗ್ರಾಮದ ಪುಟ್ಟಮಾದಯ್ಯ-ಮಹಾದೇವಮ್ಮ ದಂಪತಿ ಪುತ್ರ ಪ್ರಾಧ್ಯಾಪಕ ಪ್ರೊ.ಪಿ.ಮಹಾದೇವಯ್ಯ ಅವರಿಗೆ ‘ಡಾ. ಹಾಮಾನಾ ಭಾಷಾ ವಿಜ್ಞಾನ ಯುವ ಪ್ರಶಸ್ತಿ’ ಜತೆಗೆ 25 ಸಾವಿರ ರೂ ನಗದನ್ನು ನೀಡಿ ಗೌರವಿಸಲಾಯಿತು.