

ಬೆಳಗಾವಿ: ಕಷ್ಟ-ನಷ್ಟಗಳಿಗೆ ಎದೆಗುಂದದೆ ವಚನ ಸಾಹಿತ್ಯದ ಸಂರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರು ಸದಾಕಾಲ ಸ್ಮರಣೀಯರು ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು. ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಈಚೆಗೆ ಆಯೋಜಿಸಿದ್ದ ಮಾಸಿಕ ಅನುಭಾವ ಗೋಷ್ಠಿ ಹಾಗೂ ವಚನ ಸಂರಕ್ಷಣಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಲವು ಭಕ್ತರ ಮನೆಯ ಜಗುಲಿಗಳಲ್ಲಿದ್ದ ವಚನ ಕಟ್ಟುಗಳನ್ನು ಅವರಿಂದ ಬೇಡಿ ಪಡೆದು, ಕೆಲವರಿಗೆ ಹಣ ನೀಡಿ ವಚನಗಳ ಸಂಶೋಧಿಸಿ ಸಂರಕ್ಷಣೆ ಮಾಡಿದ್ದನ್ನು ಗಮನಿಸಿದಾಗ ಅವರ ಸಾಹಿತ್ಯಕ ಚಿಂತನೆ ಅಗಾಧವಾದದ್ದು. ಅವರ ಶ್ರಮದ ಫಲಶ್ರುತಿಯಿಂದ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಗಿದೆ ಎಂದರು. ಫ.ಗು.ಹಳಕಟ್ಟಿ ಜೀವನ ಸಾಧನೆ ಕುರಿತು ಶರಣೆ ಪ್ರೇಮಕ್ಕ ಅಂಗಡಿ ಉಪನ್ಯಾಸ ನೀಡಿದರು. ಮೋಹನ ಗುಂಡ್ಲೂರ, ಮುರಿಗೆಪ್ಪ ಬಾಳಿ, ಅರವಿಂದ ಪರುಶೆಟ್ಟಿ, ಬಸವರಾಜ ಮಿಂಡ್ರೊಳ್ಳಿ, ಬಿ.ಎಂ.ಮತ್ತಿಕೊಪ್ಪ, ಕೆಂಪಣ್ಣ ರಾಮಾಪುರಿ, ಮಹಾಂತೇಶ ತೋರಣಗಟ್ಟಿ, ಪ್ರವೀಣ ಕುಮಾರ ಚಿಕಲಿ, ಪ್ರಕಾಶ ರಾಮಗುರವಾಡಿ, ಶಿವಾನಂದ ನಾಯಿಕ, ಬಿ.ಡಿ.ಪಾಟೀಲ, ಕರಡಿಮಠ, ಸಂಕೇಶ್ವರ ವಕೀಲರು, ಅನ್ನಪೂರ್ಣಾ ಮಳಗಲಿ, ಸಂಗೀತಾ ಬಾಳಿ, ನೇತ್ರಾ ರಾಮಾಪುರಿ, ಸುಧಾ ರೊಟ್ಟಿ, ಶೋಭಾ ಶಿವಳ್ಳಿ, ಕಮಲಾ ಗಣಾಚಾರಿ, ಭಾರತಿ ರಾಮಗುರವಾಡಿ, ಕಾವೇರಿ ಕಿಲಾರಿ, ಪ್ರೀತಿ ಮಠದ, ಸುನೀತಾ ದೇಸಾಯಿ ಇತರರಿದ್ದರು.