

ಗೌರಿಬಿದನೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರಿಗೆ ಸರ್ಕಾರ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿದೆ.
ಹಿರಿಯ ನಾಯಕ: ಶಿವಶಂಕರರೆಡ್ಡಿ ಅವರು ಒಮ್ಮೆ ಕೃಷಿ ಸಚಿವ ಹಾಗೂ ಒಮ್ಮೆ ವಿಧಾನಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜತೆಗೆ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಸರಳ ನಡೆನುಡಿ ಮೂಲಕ ಸಜ್ಜನ ರಾಜಕಾರಣಿ ಎನಿಸಿಕೊಂಡಿದ್ದಾರೆ.
ಮುನ್ನುಡಿ ಬರೆದಿದ್ದೆ ಎನ್‌ಎಚ್‌ಎಸ್: ಡಾ.ಎಚ್.ಎನ್.ಪ್ರಾಧಿಕಾರ ರಚಿಸಬೇಕು. ತಾಲೂಕಿನ ಕೋಟಾಲದಿನ್ನೆ ಸಮೀಪದ ಡಾ.ಎಚ್.ಎನ್. ಸೈನ್ಸ್ ಪಾರ್ಕ್, ವಿದುರಾಶ್ವತ್ಥದ ಸ್ವಾತಂತ್ರ್ಯ ಯೋಧರ ಹುತಾತ್ಮ ಸ್ಮಾರಕ-ವೀರಸೌಧ, ಡಾ.ಎಚ್.ಎನ್.ಕಲಾ ಭವನ, ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ ಇತರ ಪ್ರದೇಶಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಿ ಅಭಿವೃದ್ಧಿಪಡಿಸಬೇಕು ಎಂದು ಮೊದಲಿಗೆ ಸರ್ಕಾರದ ಗಮನ ಸೆಳೆದಿದ್ದೇ ಎನ್.ಎಚ್. ಶಿವಶಂಕರರೆಡ್ಡಿ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಅಷ್ಟಕ್ಕೆ ಬಿಡದೆ ಬಜೆಟ್‌ನಲ್ಲಿ ೋಷಣೆಯಾಗುವವರೆಗೆ ಸರ್ಕಾರದ ಬೆನ್ನು ಹತ್ತಿದ್ದರು. ಅದರ ಲವಾಗಿ ಸರ್ಕಾರ ಇಂದು ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವ ಜತೆಗೆ ಎನ್‌ಎಚ್‌ಎಸ್ ಅವರನ್ನು ಅಧ್ಯಕರನ್ನಾಗಿ ಮಾಡಿ ಹೊಸ ಜವಾಬ್ದಾರಿ ವಹಿಸಿದೆ.
ನಗರಸಭೆ ಸದಸ್ಯರಾದ ಆರ್.ಪಿ. ಗೋಪಿನಾಥ್, ರಂಗಮ್ಮ, ಮುಖಂಡರಾದ ಖಾದರ್ ಸುಬಾನ್‌ಖಾನ್, ಬಾಬು, ಹರ್ಷವರ್ಧನ ರೆಡ್ಡಿ, ಶಾಮ್ ಇತರ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಪಕ್ಷನಿಷ್ಠೆಗೆ ಒಲಿದ ಫಲ
ಸತತ 5 ಬಾರಿ ಕ್ಷೇತ್ರದ ಶಾಸಕರಾಗಿದ್ದ ಎನ್‌ಎಚ್‌ಎಸ್ ಅವರು 2023ರ ಚುನಾವಣೆಯಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿ ಗೌಡ ವಿರುದ್ಧ ಸೋತಿದ್ದರು. ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯಾಗಿಸಿದ್ದ ಅವರು 6ನೇ ಬಾರಿಯೂ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಿತ್ತು. ಇವರ ಸೋಲು ಪಕ್ಷದ ವಲಯದಲ್ಲಿ ಬೇಸರ ಮೂಡಿಸಿತ್ತು. ಸೋತರೂ ಕೈಬಿಡುವುದಿಲ್ಲ ಎಂದು ಸಿಎಂ, ಡಿಸಿಎಂ ಭರವಸೆ ನೀಡಿದ್ದರಿಂದ ಎನ್‌ಎಚ್‌ಎಸ್ ಇತರ ಪಕ್ಷಗಳತ್ತ ತಿರುಗಿ ನೋಡಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರೂ ಟಿಕೆಟ್ ಸಿಗದಿದ್ದಕ್ಕೆ ಸಿಟ್ಟು ತೋರದೆ ಪಕ್ಷನಿಷ್ಠರಾಗಿ ಮುಂದುವರಿದರು. ಅದರ ಫಲವಾಗಿ ಇಂದು ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಲಭಿಸಿದೆ.
ಶಿಷ್ಯನಿಗೆ ಪಟ್ಟ
ಶಿವಶಂಕರ ರೆಡ್ಡಿ ಅವರು ಡಾ.ಎಚ್.ನರಸಿಂಹಯ್ಯ ಶಿಷ್ಯ. ಗುರುವಿನ ಹೆಸರಿನಲ್ಲಿ ಆರಂಭವಾದ ಪ್ರಾಧಿಕಾರದ ಪಟ್ಟ ಶಿಷ್ಯನಿಗೆ ಒಲಿದಿದೆ. ಈಗ ಪಕ್ಷ ಎನ್‌ಎಚ್‌ಎಸ್‌ಗೆ ಪ್ರಾಧಿಕಾರದ ಜವಾಬ್ದಾರಿ ವಹಿಸಿರುವುದು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವಲಯದಲ್ಲಿ ಉತ್ಸಾಹ ಮೂಡಿಸಿದೆ. ಈಗ ಅಧಿಕಾರ ಸಿಕ್ಕಿರುವುದು ಹೊಸ ಚೈತನ್ಯ ಸಿಕ್ಕಂತಾಗಿದೆ. ಜತೆಗೆ ರಾಜಕೀಯ ವಿರೋಧಿಗಳಿಗೆ ತಲೆಬಿಸಿಯುಂಟು ಮಾಡಿದೆ ಎಂದರೂ ತಪ್ಪಾಗಲಾರದು.
ಬೆಂಬಲಿಗರ ಸಂಭ್ರಮ
ಶಿವಶಂಕರ ರೆಡ್ಡಿ ಅವರನ್ನು ಡಾ.ಎಚ್.ಎನ್.ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಬೀಳುತ್ತಿದ್ದಂತೆ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇದಲವೇಣಿ ವೇಣು ಮಾತನಾಡಿ, ಪಕ್ಷ ನಿಷ್ಠ ರಾಜಕಾರಣಿಗೆ ಸಿಕ್ಕ ಗೌರವ ಇದು. ಶಿವಂಶಕರ ರೆಡ್ಡಿ ಅವರು ತಾಳ್ಮೆ, ಸರಳತೆ, ಸಜ್ಜನಿಕೆ, ಅವರ ಅಭಿವೃದ್ಧಿಪರ ಚಿಂತನೆಗಳನ್ನು ರಾಜ್ಯ ಸರ್ಕಾರ ಗೌರವಿಸಿದೆ. ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಸಿಕ್ಕಿರುವುದು ಖುಷಿ ನೀಡಿದೆ ಎಂದರು.