

ಮಂಡ್ಯ: ಯಾವ ದೇಶ ಸಾಮಾಜಿಕ, ಆರ್ಥಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿವೆಯೋ ಅದಕ್ಕೆ ಶಿಕ್ಷಣವೇ ಬುನಾದಿಯಾಗಿದೆ ಎಂದು ಮೈಸೂರು ದಕ್ಷಿಣ ವಲಯ ಪೊಲೀಸ್ ಉಪಮಹಾನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ನಿತ್ಯಸಚಿವ ಕೆ.ವಿ.ಶಂಕರಗೌಡ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ಅವರ 96ನೇ ಜನ್ಮದಿನಾಚರಣೆ ಅಂಗವಾಗಿ ಜನತಾ ಶಿಕ್ಷಣ ಟ್ರಸ್ಟ್‌ನಿಂದ ಸೋಮವಾರ ಆಯೋಜಿಸಿದ್ದ 2023 ನೇ ಸಾಲಿನ ರಾಜ್ಯಮಟ್ಟದ ಡಾ.ಎಚ್.ಡಿ. ಚೌಡಯ್ಯ ಶಿಕ್ಷಣ, ಅಂಕಣ ಸಾಹಿತ್ಯ ಮತ್ತು ಕ್ರೀಡಾ ಪ್ರಶಸ್ತಿಗಳ ಪ್ರದಾನ ಹಾಗೂ ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಿತ್ಯ ಸಚಿವ ಕೆ.ವಿ.ಶಂಕರಗೌಡ ಹಾಗೂ ಮುತ್ಸದ್ಧಿ ರಾಜಕಾರಣಿ ಡಾ.ಎಚ್.ಡಿ.ಚೌಡಯ್ಯ ಅವರು ದೂರದರ್ಶಿತ್ವದಿಂದ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಒಂದು ಅರ್ಥದಲ್ಲಿ ಇವರಿಬ್ಬರೂ ದೂರದರ್ಶಿತ್ವ ಹೊಂದಿದ್ದವರು. ಅವರು ಹಾಕಿದ ಶಿಕ್ಷಣದ ಅಡಿಪಾಯದ ಮೇಲೆ ಹಲವಾರು ಜನ ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಚೌಡಯ್ಯ ಅವರ ಹೆಸರಿನಲ್ಲಿ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕೆಲಸ ಉತ್ತಮ ಆಲೋಚನೆ. ಇದು ಪ್ರೇರಣೆ ನೀಡಿ ಸಾಧನೆ ಮಾಡಲು ಪೂರಕ. ವಿದ್ಯಾರ್ಥಿಗಳು ಇಂತಹ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ಜೀವನ ರೂಪಿಸಿಕೊಳ್ಳಿ. ನಿಮ್ಮ ಉತ್ತಮ ಯೋಜನೆಗಳಿಗೆ ಕಠಿಣ ಶ್ರಮ ಇರಲಿ ಎಂದು ಸಲಹೆ ನೀಡಿದರು.
ಪ್ರಶಸ್ತಿ ಸ್ವೀಕರಿಸಿದ ನಿವೃತ್ತ ತಹಸೀಲ್ದಾರ್ ಡಾ.ವಿ.ರಂಗನಾಥ್ ಮಾತನಾಡಿ, ಒಬ್ಬ ವ್ಯಕ್ತಿ ತಮ್ಮ ಜೀವಿತಾವಧಿಯಲ್ಲಿ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಎಚ್.ಡಿ.ಚೌಡಯ್ಯ ಅವರು ಉದಾಹರಣೆ. ಎಲ್ಲೆಲ್ಲೂ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಅಂತವರ ಹೆಸರಿನಲ್ಲಿ ನೀಡಿದ ಪ್ರಶಸ್ತಿ ಸಂತಸ ತಂದಿದೆ. ಅಂಕಣ ಸಾಹಿತ್ಯ ಎಂದರೆ ನಿಯಮಿತವಾಗಿ ಪತ್ರಿಕೆಗಳ ಅಂಕಣಕ್ಕೆ ಬರೆಯುವುದು. ಈ ಅಂಕಣವನ್ನು ಸಾಹಿತ್ಯದ ಒಂದು ಪ್ರಕಾರ ಎಂದು ಭಾವಿಸಿ ಪ್ರಶಸ್ತಿ ನೀಡುವುದು ಅಪರೂಪ. ನನ್ನಂತವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಧನ್ಯವಾದ ಎಂದರು.
ಹಣವನ್ನು ಯಾರು ಬೇಕಾದರೂ ಸಂಪಾದನೆ ಮಾಡಬಹುದು. ಆದರೆ ವಿದ್ಯೆ ಮತ್ತು ಶ್ರೇಯಸ್ಸು ಸಂಪಾದನೆ ಕೆಲವರಿಗೆ ಮಾತ್ರ ಸಾಧ್ಯ. ಸಾಧನೆಗೆ ಶ್ರಮ ಬೇಕಾಗುತ್ತದೆ.ಪ್ರತಿಯೊಬ್ಬರೂ ಏನಾದರೂ ಸಾಧನೆ ಮಾಡಬೇಕು. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಸೂತಕ. ಇಲ್ಲದಿದ್ದರೆ ಸಾವು ಸಹ ಇಂಥವನನ್ನು ಕರೆದುಕೊಂಡು ಹೋಗುತ್ತಿದ್ದೇನೆಲ್ಲ ಎಂದು ಮರುಗುತ್ತದೆ ಎಂದರು.
ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಧರ್ಮದರ್ಶಿ ಎಚ್.ಸಿ.ಮೋಹನ್‌ಕುಮಾರ್, ಉಪಾಧ್ಯಕ್ಷ ಎಂ.ಬಿ.ಶ್ರೀಧರ್, ಸಂಗಮೇಶ್ವರ್, ಡಾ.ರಾಮಲಿಂಗಯ್ಯ ಹಾಜರಿದ್ದರು.
ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಸಲಹೆಗಾರ ಪ್ರೊ.ಎಂ.ಎಚ್.ಧನಂಜಯ ಅವರಿಗೆ ಶಿಕ್ಷಣ, ನಿವೃತ್ತ ತಹಸೀಲ್ದಾರ್ ಡಾ.ವಿ.ರಂಗನಾಥ್‌ಗೆ ಅಂಕಣ ಸಾಹಿತ್ಯ ಪ್ರಶಸ್ತಿ ಹಾಗೂ ಪ್ಯಾರಾ ಒಲಂಪಿಕ್ ಕ್ರೀಡಾಪಟು ವೇಣುಗೋಪಾಲ್ ಜಯಚಂದ್ರಗೆ ಕ್ರೀಡಾ ಪ್ರಶಸ್ತಿಗೆ ಜತೆಗೆ ತಲಾ 20 ಸಾವಿರ ರೂ ನಗದನ್ನು ಪ್ರದಾನ ಮಾಡಲಾಯಿತು. ಅಂತೆಯೇ ಧನಂಜಯ ಅವರ ಪರವಾಗಿ ಸಂಸ್ಥೆಯ ಸಂಗಮೇಶ್ವರ್ ಪ್ರಶಸ್ತಿ ಸ್ವೀಕರಿಸಿದರು.
ಅಂತೆಯೇ ಹೊಳಲು ಸರ್ಕಾರಿ ಶಾಲೆಯ ಎಚ್.ವಿ.ಮೇಘನಾ, ಎಚ್.ಜೆ.ವಿನಯ್, ಹೊಳಲು ವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ಜೆ.ದೀಕ್ಷಾ ಹಾಗೂ ಸಿ.ಜೆ.ತೇಜಸ್ ಅವರಿಗೆ ತಲಾ ಎರಡು ಸಾವಿರ ರೂ ಜತೆಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.