ಡಾ.ಎಚ್.ಸಿ.ಮಹದೇವಪ್ಪ ದಲಿತ ವಿರೋಧಿಯಲ್ಲ

01 apr tnp 01 (1)
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ ಮಾತನಾಡಿದರು. ಸುರೇಶ್ ಯರಗನಹಳ್ಳಿ, ಗೋವಿಂದರಾಜು, ಕೃಷ್ಣ ಇತರರು ಇದ್ದರು.
Published on

ತಿ.ನರಸೀಪುರ: ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಗೆ ಬೆನ್ನೆಲುಬಾಗಿ ನಿಂತಿರುವ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸಮುದಾಯದ ಪರ ಹೋರಾಟ ಮಾಡಬೇಕೆಂಬ ಕನಸು ಕಂಡಂತಹವರು. ಹಾಗಾಗಿ ಸಚಿವರು ದಲಿತ ವಿರೋಧಿ ನೀತಿ ಅನುಸರಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಾ.ಡಿ.ಜಿ.ಸಾಗರ್ ಬಣ)ಯ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ ಹೇಳಿದರು.

ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿಯೇ 15 ಬಣಗಳಾಗಿ ಒಡೆದು ಹಂಚಿ ಹೋಗಿದ್ದ ಸಂಘಟನೆಗಳಲ್ಲಿ 12 ಸಮಿತಿಗಳನ್ನು ಒಗ್ಗೂಡಿಸಿದ ಮಹದೇವಪ್ಪ ಅವರು ನ್ಯಾಷನಲ್ ಕಾಲೇಜು ಆವರಣದಲ್ಲಿ ಕೋಮುವಾದಿ ಆಡಳಿತದ ವಿರುದ್ಧ ಬೃಹತ್ ಹೋರಾಟವನ್ನು ಸಮಾವೇಶದ ಮಾದರಿಯಲ್ಲಿಯೇ ಮಾಡಿದ್ದರು. ಅಂತಹವರ ವಿರುದ್ಧ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕುಂಟು ನೆಪವೊಡ್ಡಿ ದಲಿತ ವಿರೋಧಿ ಎಂಬ ಅಸ್ಪಷ್ಟತೆಯ ವಾಕ್ಯಗಳನ್ನು ಬರೆದು ತೇಜೋವಧೆ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ ಎಂದು ಪಟ್ಟಣದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಅದನ್ನು ಸರಿಪಡಿಸುವುದು ಹಾಗೂ ನನೆಗುದಿಗೆ ಬಿದ್ದಿದ್ದ ತಾಂತ್ರಿಕ ಕೆಲಸಗಳನ್ನು ಸರಿಪಡಿಸಲು ಸಚಿವರಿಗೆ ವರ್ಷಗಳೇ ಕಾಲಾವಕಾಶ ಬೇಕಾಯಿತು. ನಾವೆಲ್ಲರೂ ಒತ್ತಾಯ ಮಾಡಿದ್ದರಿಂದ ಮೈಸೂರು ನಗರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿಯನ್ನು ಪೂರ್ಣಗೊಳಿಸಲು 23.75 ರೂ. ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿಸಿದ್ದಾರೆ. ಈ ಹಿಂದೆ ದಲಿತರ ಮೇಲೆ ದೌರ್ಜನ್ಯ ನಡೆಸಿದವರಿಗೆ ಶೇ.10 ರಷ್ಟು ಶಿಕ್ಷೆ ಆಗುತ್ತಿರಲಿಲ್ಲ. ಇಂತಹ ಗಂಭೀರ ವಿಷಯವನ್ನು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ, ದೌರ್ಜನ್ಯ ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ಕೊಡಿಸಲು ಪ್ರತ್ಯೇಕ ನಿರ್ದೇಶನಾಲಯ ಆರಂಭಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ದೆಹಲಿಯಲ್ಲಿ ಐಎಎಸ್ ಮತ್ತು ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯ ಹಾಗೂ ತರಬೇತಿ ಕೇಂದ್ರವನ್ನು ತೆರೆಯುವ ಪ್ರಸ್ತಾವನೆಯನ್ನು ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸಲ್ಲಿಸಿದ್ದಾರೆ ಎಂದು ಹೇಳಿದರು.

ರಾಜ್ಯ ಸಮಿತಿ ಸದಸ್ಯ ಗೋವಿಂದರಾಜು, ಜಿಲ್ಲಾ ಸಂಘಟನಾ ಸಂಚಾಲಕರಾದ ಸುರೇಶ್ ಯರಗನಹಳ್ಳಿ, ಕೃಷ್ಣ ಕೊಳಗಟ್ಟ, ಖಜಾಂಚಿ ಪುಟ್ಟಸ್ವಾಮಿ ದೇವರಸನಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net