ಡಾ.ಗುರುರಾಜ ಕರ್ಜಗಿ ಅಭಿಮತ ವಿಎಸ್‌ಕೆ ವಿವಿಯಲ್ಲಿ ಕಾರ್ಯಕ್ರಮ

gururaj-karjagi-in-bellari
ಬಳ್ಳಾರಿ ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ವೃತ್ತೇಜನ ಅಧ್ಯಾಪರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ಪ್ರೇರಣಾ ಭಾಷಣ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಕ್ರಿಯೆಟಿವ್ ಟೀಚಿಂಗ್ ಅಧ್ಯಕ್ಷ ಡಾ.ಗುರುರಾಜ ಕರ್ಜಗಿ ಉದ್ಘಾಟಿಸಿದರು. ಮಹಾಬಲೇಶ್ವರ ಸನ್‌ರೈಸ್ ಕ್ಯಾಂಡಲ್ಸ್ ಸಂಸ್ಥಾಪಕ ಡಾ.ಭಾವೇಶ್ ಭಾಟಿಯಾ, ಕುಲಪತಿ ಪ್ರೊ.ಸಿದ್ದು ಪಿ.ಅಲಗೂರ ಮತ್ತಿತರರಿದ್ದರು.
Published on

ಬಳ್ಳಾರಿ: ವಿಷಯ ಪ್ರೀತಿ, ವೃತ್ತಿ ಗೌರವ ಮತ್ತು ಸ್ನೇಹ ಮನೋಭಾವಗಳನ್ನು ಅಳವಡಿಸಿಕೊಂಡಲ್ಲಿ ಪ್ರತಿ ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ಸಫಲರಾಗಬಹುದು ಎಂದು ಬೆಂಗಳೂರಿನ ಅಕಾಡೆಮಿ ಆಫ್ ಕ್ರಿಯೆಟಿವ್ ಟೀಚಿಂಗ್ ಅಧ್ಯಕ್ಷ ಡಾ.ಗುರುರಾಜ ಕರ್ಜಗಿ ಹೇಳಿದರು.

ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಕಟ್ಟಡ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ವೃತ್ತೇಜನ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರೇರಣಾ ಭಾಷಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಮನಸ್ಸಿಗೆ ನಾಟುವಂತೆ ಬೋಧಿಸಿ

ಒಬ್ಬ ಶಿಕ್ಷಕ ಜೀವನದ ಮೌಲ್ಯಗಳನ್ನು ಕೇವಲ ಪಾಠದ ಮೂಲಕ ಬೋಧಿಸಲು ಸಾಧ್ಯವಿಲ್ಲ. ವಿವರಣೆ ಮತ್ತು ಪ್ರದರ್ಶನ ಕಲೆಗಳ ಮೂಲಕ ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಬೋಧಿಸಿದಲ್ಲಿ ಅದು ಕೊನೆಯವರೆಗೂ ಅವರಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಸೃಜನಶೀಲ ಮತ್ತು ಕ್ರಿಯಾತ್ಮಕ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಕೀಳರಿಮೆಯನ್ನು ತೊಡೆದುಹಾಕಿ ಅವರನ್ನು ಹೊಸ ಆವಿಷ್ಕಾರಗಳೆಡೆಗೆ ಕೊಂಡೊಯ್ಯಬಹುದು ಎಂದರು.

ವಿಶ್ವವಿದ್ಯಾಲಯಗಳಿಂದ ಹೊರಹೊಮ್ಮುವ ಸಂಶೋಧನೆಗಳು ಸಮಾಜಕ್ಕೆ ಕೊಡುಗೆ ನೀಡುವ ಮಾರ್ಗದಲ್ಲಿ ಸಾಗಬೇಕು. ಎಲ್ಲ ಉಪನ್ಯಾಸಕರುಗಳು ಕಾಲಕಾಲಕ್ಕೆ ಬದಲಾಗುವ ಪಠ್ಯಕ್ರಮದ ಅನುಸಾರವಾಗಿ ಬೋಧನಾ ಪರಿಕರಗಳನ್ನು ಪರಿಷ್ಕರಣೆಗೊಳಿಸಬೇಕು ಆಗ ಮಾತ್ರ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಒದಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

70 ರಾಷ್ಟ್ರಗಳಿಗೆ ಈ ಕ್ಯಾಂಡಲ್‌ಗಳು ರವಾನೆ

ಮಹಾಬಲೇಶ್ವರ ಸನ್‌ರೈಸ್ ಕ್ಯಾಂಡಲ್ಸ್ ಸಂಸ್ಥಾಪಕ ಡಾ.ಭಾವೇಶ್ ಭಾಟಿಯಾ ಮಾತನಾಡಿ, ಕೇವಲ ಐದು ಸಾವಿರ ರೂ. ದಿಂದ ಆರಂಭವಾದ ಮೊಂಬತ್ತಿ ತಯಾರಿಕೆಯ ಕಸುಬು ಇಂದು 10 ಸಾವಿರ ಅಂಗವಿಕಲ ವ್ಯಕ್ತಿಗಳಿಗೆ ಜೀವನ ಕಟ್ಟಿಕೊಟ್ಟಿದೆ. ವಿಶ್ವದ 70 ರಾಷ್ಟ್ರಗಳಿಗೆ ಈ ಕ್ಯಾಂಡಲ್‌ಗಳು ರವಾನೆಯಾಗುತ್ತವೆ.

ಕಠಿಣ ಪರಿಶ್ರಮ, ತನು, ಮನ, ಶ್ರದ್ಧೆಯಿಂದ ಎಂಥಹದೆ ಕಷ್ಟದ ಹಾದಿಯನ್ನು ಸವೆಸಿ ಯಶಸ್ಸು ಸಾಧಿಸಬಹುದು. ಜೀವನದಲ್ಲಿ ಎದುರಾಗುವ ಕಷ್ಟಗಳಿಗೆ ಎದೆಗುಂದದೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನಿರ್ದಿಷ್ಟ ಗುರಿಯೊಂದಿಗೆ ಮುನ್ನುಗ್ಗಿದಾಗ ಯಾವ ಸಾಧನೆಯನ್ನಾದರು ಮಾಡಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ. ಸಿದ್ದು ಪಿ.ಅಲಗೂರ ಮಾತನಾಡಿ, ಸದಾ ಹೊಸ ಪ್ರಯೋಗಗಳ ಮೂಲಕ ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯವು ಪೋಷಿಸುತ್ತಿದೆ. ಪ್ರಾಮಾಣಿಕ ಪ್ರಯತ್ನವೇ ಎಲ್ಲ ರಂಗಗಳಲ್ಲಿನ ಸಾಧನೆಗೆ ಮೊದಲ ಮೆಟ್ಟಿಲು. ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯದ ಮತ್ತಷ್ಟು ಶಿಕ್ಷಕರು ಗುರುತರ ಸಾಧನೆಗೈದು ವೃತ್ತೇಜನ ಕಾರ್ಯಕ್ರಮದ ರೂವಾರಿಗಳಾಗಬೇಕು ಎಂದು ಕರೆ ನೀಡಿದರು.

8 ಉಪನ್ಯಾಸಕರಿಗೆ ಪ್ರಶಂಸಾ ಪತ್ರ

ಉತ್ತಮ ಸಂಶೋಧನೆ ಮತ್ತು ಬೋಧನಾ ಉತ್ಕೃಷ್ಟತೆ ಮೆರೆದ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ 8 ಉಪನ್ಯಾಸಕರುಗಳನ್ನು ಈ ಸಂದರ್ಭದಲ್ಲಿ ನಗದು ಪುರಸ್ಕಾರ ಹಾಗೂ ಪ್ರಶಂಸಾ ಪತ್ರ ವಿತರಿಸುವ ಮೂಲಕ ಗೌರವಿಸಲಾಯಿತು.

ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ್ ಓಲೇಕಾರ, ವಿತ್ತಾಧಿಕಾರಿ ಖಾಜಾ ಮೈನುದ್ದೀನ್ ಎಂ.ಡಿ, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ, ಪ್ರೊ.ವಿಜಯಕುಮಾರ ಮಲಶೆಟ್ಟಿ , ಪ್ರೊ.ಜಿ.ಪಿ.ದಿನೇಶ್, ಡಾ.ಶಶಿಧರ್, ಡಾ. ನಾಗಭೂಷಣ್ ಸಿ.ಎಂ, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net