

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ಡಾ.ಗೋಪಿನಾಥ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡದಿರುವುದು ಹಾಗೂ 108 ಆಂಬುಲೆನ್ಸ್ ವಾಹನವನ್ನು ಬೇರೆಡೆಗೆ ವರ್ಗಾಯಿಸಿರುವ ಬಗ್ಗೆ ಕೊಡ್ಲಿಪೇಟೆ ಭಾಗದ ನಾನಾ ಸಂಘ-ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದು, ಈ ಸಂಬಂಧ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತು. ಅಲ್ಲದೆ ಸಾರ್ವ ಜನಿಕರು ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಪತ್ರ ನೀಡಿದ್ದ ಹಿನ್ನೆಲೆಯಲ್ಲಿ ಡಾ.ಗೋಪಿನಾಥ್ ಭೇಟಿ ನೀಡಿದ್ದರು.
ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲ. ಅಲ್ಲದೆ ಖಾಲಿ ಇರುವ ಹುದ್ದೆಗೆ ಹೊಸಬರನ್ನು ನೇಮಿಸಿಲ್ಲ. ಅಲ್ಲದೆ ವೈದ್ಯರ ನೇಮಕಾತಿ ಕುರಿತು ಪತ್ರಿಕೆಗಳಲ್ಲಿ ಜಾಹಿರಾತು ನೀಡಿದರೂ ಇಲ್ಲಿಗೆ ಬರಲು ಯಾರೂ ಆಸಕ್ತಿ ವಹಿಸುತ್ತಿಲ್ಲ ಎಂದು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಡಾ.ಗೋಪಿನಾಥ್‌ಗೆ ಮನವರಿಕೆ ಮಾಡಿದರು.
ಆಸ್ಪತ್ರೆಯ ಸೇವೆಗಾಗಿ ಕಾಯ್ದಿರಿಸಿದ್ದ 108 ಆಂಬುಲೆನ್ಸ್ ವಾಹನವನ್ನು ರಾಜಕಿಯ ಪಿತೂರಿಯಿಂದ ಬೇರೆ ಕಡೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸಮಸ್ಯೆಯನ್ನು ಆಲಿಸಿದ ಗೋಪಿನಾಥ್, ಕಾಯಂ ವೈದ್ಯರ ನೇಮಕ, ಆಂಬುಲೆನ್ಸ್ ವಾಹನ ವಾರ್ಗವಣೆ ಸೇರಿ ಇತರ ಸಮಸ್ಯೆಗಳ ಬಗ್ಗೆ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿದರು.
ಆರೋಗ್ಯ ಕೇಂದ್ರದ ಉಸ್ತುವಾರಿ ವೈದ್ಯಾಧಿಕಾರಿ ಡಾ.ಚೇತನ್, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಕರವೇ ಅಧ್ಯಕ್ಷ ಡಿ.ಪಿ.ಭೂಪಾಲ್, ಪ್ರಮುಖರಾದ ಮಹಮದ್ ಹನೀಫ್, ಆರೋಗ್ಯ ಇಲಾಖೆ ಸಿಬ್ಬಂದಿ ನವೀನ್ ಮುಂತಾದವರು ಹಾಜರಿದ್ದರು.