

ಹುಬ್ಬಳ್ಳಿ : ಅಧಿಕಾರ ವಹಿಸಿಕೊಂಡ ಕೇವಲ ಐದೂವರೆ ತಿಂಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ವರ್ಗಾವಣೆಗೊಂಡಿದ್ದಾರೆ.
ಸ್ಮಾರ್ಟ್ಸಿಟಿ ಎಂಡಿ ಆಗಿದ್ದ ಡಾ. ರುದ್ರೇಶ ಘಾಳಿ ಅವರಿಗೆ ಕಳೆದ ಜನವರಿ 27 ರಂದು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ಹೆಚ್ಚುವರಿ ಅಧಿಕಾರವನ್ನು ಸರ್ಕಾರ ನೀಡಿತ್ತು. ಹಿರಿಯ ಕೆಎಎಸ್ ಅಧಿಕಾರಿಯಾಗಿರುವ ಡಾ. ಘಾಳಿ, ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳನ್ನು ಅರಿತು, ಕಾರ್ಯನಿರ್ವಹಿಸುತ್ತಿದ್ದರು. ಅವಳಿ ನಗರದ ಸಾರ್ವಜನಿಕ ಸಮಸ್ಯೆಗಳು ಒಂದೊಂದಾಗಿ ನಿವಾರಣೆಗೊಳ್ಳುತ್ತವೆ ಎನ್ನುತ್ತಿರುವಾಗಲೇ ಸರ್ಕಾರ, ಅವರನ್ನು ವರ್ಗಾವಣೆಗೊಳಿಸಿದೆ.
ಈ ಮೊದಲು ಪಾಲಿಕೆ ಆಯುಕ್ತರಾಗಿ ಬರುವ ಅಧಿಕಾರಿಗಳು ಕನಿಷ್ಠ ಎರಡ್ಮೂರು ವರ್ಷಗಳವರೆಗಾದರೂ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಕಳೆದ ಕೆಲ ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಐಎಎಸ್, ಹಿರಿಯ ಕೆಎಎಸ್ ಅಧಿಕಾರಿಗಳು ಕನಿಷ್ಠ ಎರಡು ವರ್ಷದವರೆಗೂ ಕಾರ್ಯನಿರ್ವಹಿಸುತ್ತಿಲ್ಲ. ಒಂದರಿಂದ ಒಂದೂವರೆ ವರ್ಷ ಪೂರ್ಣಗೊಳ್ಳುವುದರೊಳಗಾಗಿಯೇ ಸರ್ಕಾರ ಅವರನ್ನು ಬೇರೆಡೆ ವರ್ಗಾಯಿಸುತ್ತಿದೆ.
ಐಎಎಸ್ ಅಧಿಕಾರಿ ಡಾ. ಸುರೇಶ ಇಟ್ನಾಳ ಅವರು 3-5-2021ಕ್ಕೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, 13-1-2022ಕ್ಕೆ ವರ್ಗಾವಣೆಗೊಂಡರು. 13-1-2022ಕ್ಕೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದ ಮತ್ತೊಬ್ಬ ಐಎಎಸ್ ಅಧಿಕಾರಿ ಡಾ. ಗೋಪಾಲ ಕೃಷ್ಣ, ಒಂದೂವರೆ ವರ್ಷ ಅಧಿಕಾರ ನಡೆಸಿದ ನಂತರ 1-7-2023ಕ್ಕೆ ವರ್ಗಾವಣೆಗೊಂಡರು.
ಮತ್ತೊಬ್ಬ ಐಎಎಸ್ ಅಧಿಕಾರಿ ಭರತ ಎಸ್. ಅವರು 6-7-2023ಕ್ಕೆ ಅಧಿಕಾರ ವಹಿಸಿಕೊಂಡು, 7-7-2023ಕ್ಕೆ ವರ್ಗಾವಣೆಗೊಂಡು. ಅಧಿಕಾರ ವಹಿಸಿಕೊಂಡ ಕೇವಲ ಒಂದು ದಿನ ಮಾತ್ರ ಆಯುಕ್ತರಾಗಿ ಕಾರ್ಯನಿರ್ವಹಿಸಿರುವುದು ಅಚ್ಚರಿಯ ಸಂಗತಿ.
7-7-2023ಕ್ಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕೆಎಎಸ್ ಅಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, 27-1-2025ರವರೆಗೆ ಕಾರ್ಯನಿರ್ವಹಿಸಿದರು. ಇವರು ಸಹ ಒಂದೂವರೆ ವರ್ಷದವರೆಗೆ ಅವಳಿ ನಗರದಲ್ಲಿ ಆಯುಕ್ತರಾಗಿದ್ದರು. ಇವರ ನಂತರ 27-1-2025ರಿಂದ ಆಯುಕ್ತರಾಗಿದ್ದ ಡಾ. ರುದ್ರೇಶ ಘಾಳಿ, ಕೇವಲ ಐದೂವರೆ ತಿಂಗಳಲ್ಲಿ ವರ್ಗಾವಣೆಗೊಂಡರು.
ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೊಳ್ಳಬೇಕಾದರೆ ಆಯುಕ್ತರಾಗಿ ಬರುವವರು ಕನಿಷ್ಠ ಎರಡರಿಂದ ಮೂರುವರ್ಷಗಳವರೆಗಾದರೂ ಇಲ್ಲಿರಬೇಕೆಂಬುದು ಜನಸಾಮಾನ್ಯರ ಅಭಿಪ್ರಾಯ. ಆದರೆ, ಇಲ್ಲಿಗೆ ಕಮಿಷನರ್ ಆಗಿ ಬರುವವರು ಒಂದರಿಂದ ಒಂದೂವರೆ ವರ್ಷದೊಳಗೆ ಬೇರೆಡೆಗೆ ವರ್ಗಾವಣೆಗೊಳ್ಳುತ್ತಿರುವುದು ಅಭಿವೃದ್ಧಿ ದೃಷ್ಟಿಯಿಂದ ಹಿನ್ನೆಡೆಗೆ ಕಾರಣ ಎನ್ನಬಹುದು.
ಸಮರ್ಪಕ ತ್ಯಾಜ್ಯ ನಿರ್ವಹಣೆ ಪಾಲಿಕೆ ವ್ಯಾಪ್ತಿಯ ದೊಡ್ಡ ಸಮಸ್ಯೆಯಾಗಿದೆ. ಇದರೊಂದಿಗೆ ಧೂಳು ಮುಕ್ತ ಮಹಾನಗರ, ಗುಣಮಟ್ಟದ ರಸ್ತೆಗಳ ನಿರ್ವಣ, ಸ್ವಚ್ಛ-ಸುಂದರ ಮಹಾನಗರ ಎಂಬೆಲ್ಲ ಕನಸುಗಳು ಇದುವರೆಗೆ ಕನಸಾಗಿಯೇ ಉಳಿದಿವೆ. ಈ ಎಲ್ಲ ಕನಸುಗಳು ನನಸಾಗಬೇಕಾದರೆ ಹು-ಧಾ ಮಹಾನಗರ ಪಾಲಿಕೆಯಲ್ಲಿ ಹೆಚ್ಚು ಸಮಯದವರೆಗೆ ನೆಲೆಯೂರಿ ನಿಲ್ಲುವ ಆಯುಕ್ತರ ಅಗತ್ಯವಿದೆ. ಅದರಲ್ಲಿಯೂ ಒಬ್ಬ ಐಎಎಸ್ ಅಧಿಕಾರಿ ಅವಳಿ ನಗರಕ್ಕೆ ಬೇಕೆಂಬ ಬೇಡಿಕೆ ಮಹತ್ವ ಪಡೆದುಕೊಂಡಿದೆ.
ಈ ಬಾರಿಯಾದರೂ ಸರ್ಕಾರ ಕನಿಷ್ಠ ಮೂರು ವರ್ಷಗಳವರೆಗಾದರೂ ಒಬ್ಬ ಐಎಎಸ್ ಅಧಿಕಾರಿಯನ್ನು ಪಾಲಿಕೆ ಆಯುಕ್ತರನ್ನಾಗಿ ನಿಯೋಜಿಸುತ್ತದೆಯೋ ?