ಡಾ.ಗಂಗೂಬಾಯಿ ಹಾನಗಲ್ ವಿವಿಗೆ ಸೌಕರ್ಯ ಕಲ್ಪಿಸಲಿ: ರಾಜ್ಯ ಸರ್ಕಾರಕ್ಕೆ ಎಂಎಲ್ಸಿ ಉಮಾಶ್ರೀ ಒತ್ತಾಯ

mysore
Published on

ಮೈಸೂರು: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಸ್ವಂತ ಕಟ್ಟಡ, ಮೂಲಸೌಕರ್ಯ ಇನ್ನೂ ನೀಡಿಲ್ಲ. ಇದು ವಿಷಾದಕರ ಸಂಗತಿ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳುವ ಮೂಲಕ ವಿವಿಗೆ ಬೆಂಬಲ ಮತ್ತು ಉತ್ತೇಜನ ನೀಡಬೇಕು ಎಂದು ಎಂಎಲ್‌ಸಿ ಹಾಗೂ ಹಿರಿಯ ನಟಿ ಉಮಾಶ್ರೀ ಹೇಳಿದರು.


ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ‘ಸುವರ್ಣ ಕರ್ನಾಟಕ; ನಾಟಕ-50’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.


ಸಂಗೀತ ವಿವಿ ಬೆಳವಣಿಗೆಗೆ ಅಗತ್ಯ ಅನುದಾನ, ಕಟ್ಟಡ, ಮೂಲ ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಿಕೊಡಬೇಕಾಗುತ್ತದೆ. ಈ ಕುರಿತು ವಿವಿಯ ಕುಲಪತಿಯೊಬ್ಬರು ಮಾತ್ರ ಹೇಳಿದರೆ ಸಾಲದು. ಸಾಂಸ್ಕೃತಿಕ ಲೋಕದವರು ಮಾತನಾಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಒಂದೇ ಧ್ವನಿಯಲ್ಲಿ ಬೇಡಿಕೆಯನ್ನು ಮಂಡಿಸಿ ಸರ್ಕಾರದ ಗಮನ ಸೆಳೆಯಬೇಕು. ಇಲ್ಲವಾದರೆ ನರಿಯ ಕೂಗು ಗಿರಿ ಮುಟ್ಟಲು ಸಾಧ್ಯವಾಗಲಿದೆಯೇ? ಎಂದು ಮಾರ್ಮಿಕವಾಗಿ ಹೇಳಿದರು.


ನಾಟಕ, ಜಾನಪದ, ಸಂಗೀತ, ನೃತ್ಯ ಬೇರೆಯಲ್ಲ. ಎಲ್ಲ ಕಲೆಗಳನ್ನೂ ಒಳಗೊಂಡಿರುವುದೇ ರಂಗಭೂಮಿಯ ವಿಶೇಷ. ಇದು ಕಲಾವಿದರಿಗೆ ಹೊಟ್ಟೆ ಪಾಡು ಎಂಬುದು ಒಂದು ಭಾಗವಷ್ಟೇ. ಸಮಾಜಮುಖಿ ಚಿಂತನೆ ಮುಖ್ಯ. ಈ ತತ್ವದಡಿ ನಾಟಕರಂಗವನ್ನು ಕಟ್ಟುವ ದೊಡ್ಡ ಕೆಲಸವಾಗಬೇಕಿದೆ. ಹಿರಿಯ ಮಾರ್ಗದರ್ಶನದಲ್ಲಿ ಹೊಸ ಪೀಳಿಗೆ ಹಠತೊಟ್ಟು ಇದನ್ನು ಮಾಡಬೇಕಿದೆ ಎಂದರು.


ರಂಗಭೂಮಿಯ ಕೊಡುಗೆ ದೊಡ್ಡದು. ಅನಾದಿ ಕಾಲದಿಂದ ಹಿಡಿದು ರಾಜರು, ಬ್ರಿಟಿಷರು ಈ ವರೆಗೂ ಈ ಕಲೆ ವೈಚಾರಿಕ, ಶಾಸ್ತ್ರೀಯವಾಗಿ ಕಾಲಕ್ಕೆ ಅನುಗುಣವಾಗಿ ರೂಪಾಂತರಗೊಂಡಿದೆ. ಪರಂಪರೆ, ಸಂಸ್ಕೃತಿ, ನಾಡು ಕಟ್ಟುವ ಕಾಯಕ ಮಾಡಿದೆ. ಆದರೀಗ ವಿದ್ಯುನ್ಮಾನ ಕಲೆಗಳ ಹಾವಳಿಯಿಂದ ರಂಗಭೂಮಿ ಅನೇಕ ಸವಾಲು ಎದುರಿಸುತ್ತಿದೆ. ಹಿಂದಿನ ಜನಪ್ರಿಯತೆ ಈಗ ಮರೆಯಾಗಿದೆ. ಆದ್ದರಿಂದ ಮರುಹುಟ್ಟು ಪಡೆದುಕೊಳ್ಳಬೇಕಿದೆ ಎಂದರು.


ಕಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಮಾತನಾಡಿ, 2009ರಲ್ಲಿ ಪ್ರಾರಂಭವಾದ ಸಂಗೀತ ವಿವಿಗೆ ಇನ್ನೂ ಕಾಯಂ ಕಟ್ಟಡ, ಮೂಲ ಸೌಕರ್ಯವನ್ನು ನೀಡಿಲ್ಲ. ಇದು ದುರಂತವೇ ಸರಿ. ಈ ಕುರಿತು ರಾಜ್ಯ ಸರ್ಕಾರ, ಕಲಾವಿದರು ಗಮನ ನೀಡಬೇಕು ಎಂದು ಆಗ್ರಹಿಸಿದರು.


ಕಳೆದ 12 ವರ್ಷದಿಂದ ಪ್ರಾಥಮಿಕ ಶಾಲಾ ಕಟ್ಟಡದಲ್ಲೇ ವಿವಿ ನಡೆಯುತ್ತಿದೆ. ಈಗಿರುವ 130 ವರ್ಷದಷ್ಟು ಹಳೇ ಕಟ್ಟಡವನ್ನು ನವೀಕರಣ ಮಾಡಿ ಉಪಯೋಗಿಸಲಾಗುತ್ತಿದೆ. ವಿವಿ ಹಣದಿಂದಲೇ ಮುಡಾದಿಂದ 5 ಎಕರೆ ಜಾಗ ಖರೀದಿ ಮಾಡಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಕೊಟ್ಟಿಲ್ಲ ಎಂದೂ ಬೇಸರ ವ್ಯಕ್ತಪಡಿಸಿದರು.


ವಿವಿ ಆರಂಭ ದಿನಗಳಲ್ಲಿ ಅನುದಾನ ನೀಡಿ ಬಳಿಕ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಅನುದಾನವಿಲ್ಲದೆ ವಿವಿ ಬೆಳೆಯುವುದು ಕಷ್ಟಕರ. ಆದರೆ, ಆಂತರಿಕ ಸಂಪನ್ಮೂಲ ಬಳಸಿಕೊಂಡು ವಿವಿ ನಿಧಾನಗತಿಯಲ್ಲಿ ಪ್ರಗತಿ ಹೊಂದುತ್ತಿದೆ. 50 ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ 17 ಸಾವಿರ ವಿದ್ಯಾರ್ಥಿಗಳು ರಾಜ್ಯಾದ್ಯಂತ ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದರು.


ಸಂಗೀತ ವಿವಿ ಮುಚ್ಚಿಹೋಗಲಿದೆ ಎಂದು ಕೆಲವರು ಈ ಹಿಂದೆ ಕುಹುಕವಾಡಿದ್ದರು. ಜನರು ಕೆಟ್ಟದಾಗಿದ್ದಾಗ ಮಾತ್ರ ಮಾತನಾಡುತ್ತಾರೆ. ಅದೇ ಒಳ್ಳೆಯದಾಗಿದ್ದಾಗ ಬಾಯಿಬಿಡಲ್ಲ. ರಾಜ್ಯದಲ್ಲಿ 18 ವಿಶ್ವವಿದ್ಯಾಲಯಗಳು ಅತಂತ್ರ ಸ್ಥಿತಿಯಲ್ಲಿದ್ದರೂ, ಸಂಗೀತ ವಿವಿ ಉತ್ತಮ ಸ್ಥಿತಿಯಲ್ಲಿ ಇದೆ ಎಂದರು.


ಉನ್ನತ ಶಿಕ್ಷಣದಲ್ಲಿ ರಂಗಭೂಮಿ ವಿಷಯ ಕಲಿಕೆಗೂ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಬೇಕು. ಇದು ಬೇರೆ ವಿಷಯದವರಿಗೆ ಮಾತ್ರ ಇದೆ. ಇದು ರಂಗಶಿಕ್ಷಣಕ್ಕೂ ಅನ್ವಯಿಸಬೇಕು ಎಂದರು.


ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಸದಸ್ಯ ಡಾ.ಎಂ.ಎ.ಜಾಹಿದಾ, ರಂಗನಿರ್ದೇಶಕ ಡಾ.ಸಿ.ಬಸವಲಿಂಗಯ್ಯ, ರಂಗ ವಿಮರ್ಶಕ ಜಿ.ಎನ್.ಮೋಹನ್, ವಿವಿ ಕುಲಸಚಿವೆ ಕೆ.ಎಸ್.ರೇಖಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net