ಕರಾವಳಿಯಲ್ಲಿ ‘ವಿಶೇಷ ಕಾರ್ಯಪಡೆ’ (ಎಸ್‌ಎಎಫ್)ಗೆ ಚಾಲನೆ ಅಗತ್ಯ ಬಿದ್ದರೆ ರಾಜ್ಯಕ್ಕೆ ವಿಸ್ತರಣೆ ಡಾ. ಜಿ. ಪರಮೇಶ್ವರ್

Mng-jun13-scdcc2
Published on

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಂಘರ್ಷ ತಡೆಗಟ್ಟಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ದ.ಕ., ಉಡುಪಿ ಮತ್ತು ಶಿವಮೊಗ್ಗಕ್ಕೆ ಸೀಮಿತವಾಗಿ ವಿಶೇಷ ಕಾರ್ಯಪಡೆ ಆರಂಭಿಸಲಾಗಿದೆ. ಬೇರೆ ಜಿಲ್ಲೆಗಳಿಗೆ ಈ ಪಡೆಯ ಅಗತ್ಯ ಬೀಳದು. ಒಂದು ವೇಳೆ ಅಗತ್ಯ ಬಿದ್ದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಪೊಲೀಸ್‌ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನೂತನ ‘ವಿಶೇಷ ಕಾರ್ಯಪಡೆ’ಗೆ ಚಾಲನೆ ಹಾಗೂ ಪೊಲೀಸ್ ವಸತಿ ಗೃಹ ಉದ್ಘಾಟನೆ ನೆರವೇರಿಸಿದ ಬಳಿಕ ಅವರು ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿಯೇ ಪ್ರಥಮವಾಗಿ ನಮ್ಮ ರಾಜ್ಯದಲ್ಲಿ ಕೋಮು ಸಂಘರ್ಷ ತಡೆಗಟ್ಟಲು ವಿಶೇಷ ಕಾರ್ಯ ಪಡೆ ರಚನೆಯಾಗಿದೆ. ಈ ಭಾದಲ್ಲಿ ಶಾಂತಿ ಸ್ಥಾಪಿಸಿ ಕೋಮು ಸಾಮರಸ್ಯ ಪುನರ್ ರಚಿಸುವುದು ಇದರ ಉದ್ದೇಶ. ಈ ಭಾಗದಲ್ಲಿ ಶಾಂತಿ ನೆಲೆಸಿದರೆ ಇಡೀ ರಾಜ್ಯದಲ್ಲಿ ಶಾಂತಿ ಇರುತ್ತದೆ. ಹಾಗಾಗಿ ಈ ಪಡೆಯ ಮೂಲಕ ಇಲ್ಲಿಗೇ ಈ ಮತೀಯ ಘರ್ಷಣೆಗಳು ಕೊನೆಯಾಗಲಿ. ಇಲ್ಲಿಯೂ ಹೆಚ್ಚು ಕಾಲ ಈ ಪಡೆಯ ಅಗತ್ಯ ಬೀಳದಿರಲಿ ಎಂಬ ವಿಶ್ವಾಸವಿದೆ ಎಂದವರು ಹೇಳಿದರು.

ಸಮೃದ್ಧ, ಸುಸಂಸ್ಕೃತ ಜಿಲ್ಲೆಯಲ್ಲಿ ದ್ವೇಷ ಭಾವನೆ ಹೆಚ್ಚಾಗಿದೆ. ಇದನ್ನು ಹತ್ತಿಕ್ಕದೆ ಹೋದರೆ ಇದು ಬೇರೆ ಭಾಗಕ್ಕೂ ವಿಸ್ತರಿಸುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವಿಶೇಷ ಕಾರ್ಯ ಪಡೆ ರಚಿಸುವ ಅಗತ್ಯತೆ ಕಂಡು ಬಂತು. ಈಗಾಗಲೇ ನಕ್ಸಲರು ಶರಣಾಗತರಾಗಿ ನಕ್ಸಲ್ ನಿಗ್ರಹ ಪಡೆಗೆ ಹೆಚ್ಚಿನ ಕೆಲಸವಿಲ್ಲ. ಅದಕ್ಕಾಗಿ ನಕ್ಸಲ್ ನಿಗ್ರಹ ಪಡೆಯನ್ನು ಬಳಸಿಕೊಂಡು ಅದೇ ಮಾದರಿಯಲ್ಲಿ ವಿಶೇಷ ಕಾರ್ಯ ಪಡೆಗೆ ಸರ್ಕಾರ ತೀರ್ಮಾನಿಸಿ ಕಾರ್ಯಪಡೆಗೆ ಚಾಲನೆ ನೀಡಿದೆ ಎಂದರು.

 ಕಾನ್‌ಸ್ಟೆಬಲ್‌ಗೂ ಸೈಬರ್ ತರಬೇತಿ: ರಾಜ್ಯ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಶೇ. 99ರಷ್ಟು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೊಳಪಡಿಸಲಾಗಿದೆ. ಅಪರಾಧ ದರ ಕಡಿಮೆ ಆಗಿದೆ. ಸೈಬರ್ ಅಪರಾಧ ಪ್ರಕರಣಗಳ ವರದಿಗೆ ಎಲ್ಲಾ ಕಡೆ ಅವಕಾಶ ಮಾಡಲಾಗಿದೆ. ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾನ್‌ಸ್ಟೆಬಲ್‌ಗೂ ಸೈಬರ್ ಅಪರಾಧದ ಬಗ್ಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಪ್ರತಿ ಎಸ್ಪಿ ಕಚೇರಿಯಲ್ಲಿ ತರಬೇತಿ ಘಟಕ ಆರಂಭಿಸಲಾಗಿದೆ. ಇಲ್ಲಿ ಕಾನ್‌ಸ್ಟೇಬಲ್‌ಗಳಿಗೆ ತಾಂತ್ರಿಕ ತರಬೇತಿ ನೀಡಲಾಗುವುದು. ಹೈದರಾಬಾದ್‌ನ ಸಂಸ್ಥೆಯೊಂದರ ವರದಿ ಪ್ರಕಾರ ದೇಶದಲ್ಲಿಯೇ ಜನರಿಗೆ ಶೀಘ್ರ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಪೊಲೀಸರು ಮೊದಲ ಸ್ಥಾನದಲ್ಲಿದ್ದಾರೆ ಎಂಬುದು ಶ್ಲಾಘನೀಯ ಎಂದವರು ಈ ಸಂದರ್ಭ ಹೇಳಿದರು.

 ಎಲ್ಲರಿಗೂ ವಸತಿ ಸೌಲಭ್ಯ: ದಿನದ 24 ಗಂಟೆಯೂ ನಮ್ಮ ಸುರಕ್ಷತೆಯನ್ನು ಖಾತರಿಪಡಿಸುವ ಪೊಲೀಸ್ ಸಿಬ್ಬಂದಿ ಕೂಡಾ ಉತ್ತಮ ಜೀವನ, ಮನೆಯನ್ನು ಹೊಂದಿರಬೇಕೆಂಬ ನಿಟ್ಟಿನಲ್ಲಿ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಈ ದಿನ 64 ವಸತಿ ಗೃಹಗಳನ್ನು ಮಂಗಳೂರಿನಲ್ಲಿ ಉದ್ಘಾಟಿಸಲಾಗಿದೆ. ಆರಂಭದಲ್ಲಿ ತಲಾ 18 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಆರಂಭಿಸಲಾಗಿದ್ದರೆ, ಇದೀಗ ತಲಾ 28 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಶೇ. 40ರಷ್ಟು ಪೊಲೀಸ್ ಸಿಬ್ಬಂದಿ ವಸತಿ ಗೃಹಗಳನ್ನು ಹೊಂದಿದ್ದು, ಎಲ್ಲರಿಗೂ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದವರು ಹೇಳಿದರು.

 ದೇಶಕ್ಕೆ ಮಾದರಿ: ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಎ. ಸಲೀಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರ ಸ್ಥಾಪಿಸಿರುವ ವಿಶೇಷ ಕಾರ್ಯ ಪಡೆ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ ಎಂದರು.

ಈ ಸಂದರ್ಭ ವಿಶೇಷ ಕಾರ್ಯಪಡೆಯ ಮಾಹಿತಿಯುಳ್ಳ ಪುಸ್ತಕ ಹಾಗೂ ಲಾಂಛನವನ್ನು ಡಾ.ಜಿ.ಪರಮೇಶ್ವರ್ ಬಿಡುಗಡೆಗೊಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ, ಐವನ್ ಡಿಸೋಜ, ಶಾಸಕ ಅಶೋಕ್ ಕುಮಾರ್ ರೈ, ಅಪರ ಪೊಲೀಸ್ ಮಹಾ ನಿರ್ದೇಶಕ ಎಸ್.ಮುರುಗನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್ಪಿ ಡಾ.ಅರಣ್ ಕೆ., ಜಿ.ಪಂ. ಸಿಇಒ ಡಾ. ಆನಂದ್ ಮೊದಲಾದವರು ಉಪಸ್ಥಿತರಿದ್ದರು.

ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸ್ವಾಗತಿಸಿದರು. ಮಂಗಳೂರು ಪೊಲೀಸ್ ಆಯುಕ್ತ ಹಾಗೂ ಎಸ್‌ಎಎಫ್‌ನ ಮುಖ್ಯಸ್ಥರಾದ ಸುಧೀರ್ ಕುಮಾರ್ ರೆಡ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net