

ಮಂಡ್ಯ: ಸಂಸದ, ಸಚಿವ, ಶಾಸಕ ಹಾಗೂ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಡಾ.ಜಿ.ಮಾದೇಗೌಡರು ಬಹಳಷ್ಟು ಕೆಲಸ ಮಾಡಿದ್ದಾರೆ. ಯುವಕರಿಗೆ ಆದರ್ಶ ವ್ಯಕ್ತಿವಾಗಿರುವ ಅವರಂತಹ ಹೋರಾಟಗಾರರು ಜಿಲ್ಲೆಗೆ ಅಗತ್ಯ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ ಅಭಿಪ್ರಾಯಪಟ್ಟರು.
ಇಲ್ಲಿನ ಕುವೆಂಪುನಗರ ಹೌಸಿಂಗ್ ಬೋರ್ಡ್‌ನ ಬೋರೇಗೌಡ ಉದ್ಯಾನದಲ್ಲಿ ಕನ್ನಡ ಸೇನೆ ಮತ್ತು ಉದ್ಯಾನದ ಹಿರಿಯ ನಾಗರಿಕ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಜಿ.ಮಾದೇಗೌಡರ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾದೇಗೌಡರು ನಮ್ಮನ್ನಗಲಿದ್ದರೂ ನಮ್ಮ ಮುಂದೆ ಗಾಂಧಿಭವನದಲ್ಲಿ ಇದ್ದಾರೆಂದೇ ಭಾಸವಾಗುತ್ತದೆ. ಕಾವೇರಿ ಹೋರಾಟದ ಚಳುವಳಿ ಎಂದರೆ ಅವರು ನೆನಪಾಗುತ್ತಾರೆ. ಜಿಲ್ಲೆಯ ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಜಿಲ್ಲೆಗೆ ಒಳ್ಳೆಯ ಕೆಲಸಗಳನ್ನು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಗ್ರಾಮದಲ್ಲೂ ಮಾದೇಗೌಡರಂತ ವ್ಯಕ್ತಿ ಇರಬೇಕು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ನಿವೃತ್ತ ಉಪನ್ಯಾಸಕ ಕೃಷ್ಣೇಗೌಡ, ಮಹಾದೇವ ಶಿವರಾಂ, ಶ್ರೀರಾಮ್, ವಿಶುಕುಮಾರ್, ಜಗನ್ನಾಥ್‌ರಾವ್, ಮರಿಸ್ವಾಮಿ, ಶೇಖರ್ ಇತರರಿದ್ದರು. ಇದೇ ವೇಳೆ ನಿವೃತ್ತ ಪಿಎಸ್‌ಐ ರಾಜೇಗೌಡ, ಶಿಕ್ಷಣ ಇಲಾಖೆ ನಿವೃತ್ತ ನೌಕರೆ ರುಕ್ಮಿಣಮ್ಮ, ಸಮಾಜ ಸೇವಕ ಅಂಕೇಗೌಡ ಅವರನ್ನು ಅಭಿನಂದಿಸಲಾಯಿತು.