

ಮಂಡ್ಯ: ಪ್ರತಿಷ್ಠಿತ ಡಾ.ಜಿ.ಮಾದೇಗೌಡ ಪ್ರತಿಷ್ಠಾನದಿಂದ ಕೊಡಮಾಡುವ 24ನೇ ವರ್ಷದ ರಾಜ್ಯಮಟ್ಟದ ಡಾ.ಜಿ.ಮಾದೇಗೌಡ ಸಮಾಜಸೇವಾ ಪ್ರಶಸ್ತಿಗೆ ಗದಗ ಜಿಲ್ಲೆ ಹುಲ್‌ಕೋಟಿಯ ಡಿ.ಆರ್.ಪಾಟೀಲ್ ಮತ್ತು ಸಾವಯವ ಕೃಷಿಕ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆ ಹುಲೇಕಲ್ ಗ್ರಾಮದ ಶ್ರೀಪಾದ ಪಿ.ಆಚಾರ್ಯ ಆಯ್ಕೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ನಂಜೇಗೌಡ, ಜು.10ರಂದು ನಗರದ ರೈತ ಸಭಾಂಗಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಇಬ್ಬರು ಸಾಧಕರಿಗೂ ತಲಾ 25 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಅಂದು ಸಂಜೆ 4ಗಂಟೆಗೆ ಆಯೋಜಿಸಿರುವ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಂಸದರೂ ಆದ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ವಹಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದು, ಶಾಸಕ ರವಿಕುಮಾರ್ ಗಣಿಗ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರೂ ಆದ ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮಧು ಜಿ.ಮಾದೇಗೌಡ ಘನ ಉಪಸ್ಥಿತಿ ಇರಲಿದ್ದಾರೆ ಎಂದು ವಿವರಿಸಿದರು.
ಪ್ರಾಧ್ಯಾಪಕರಾದ ಕೃಷ್ಣ, ನಾಗೇಶ್, ನಾಗರಾಜು, ಮಹದೇವಸ್ವಾಮಿ, ರಾಮಕೃಷ್ಣ ಇದ್ದರು.
ಡಿ.ಆರ್.ಪಾಟೀಲ್
ಡಿ.ಆರ್.ಪಾಟೀಲ್: 1947 ಮೇ.19ರಂದು ಜನಿಸಿದ ಡಿ.ಆರ್.ಪಾಟೀಲ್ ಬಿ.ಇ ಮೆಕ್ಯಾನಿಕಲ್ ಪದವೀಧರರು. ಸ್ವಾಮಿ ವಿವೇಕಾನಂದರ ತತ್ವ ಆದರ್ಶವನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ಯುವಜನತೆಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅಖಿಲ ಭಾರತ ಮತ್ತು ರಾಜ್ಯ ಸಹಕಾರಿ ನೂಲಿನ ಗಿರಣಿಗಳ ಮಹಾಮಂಡಳದ ಅಧ್ಯಕ್ಷ ಹುದ್ದೆ ನಿರ್ವಹಿಸಿದ್ದಾರೆ. 1992ರಿಂದ 2007ರವರೆಗೆ ಅಂದರೆ ನಾಲ್ಕು ಅವಧಿಗೆ ಶಾಸಕರಾಗಿ ರಾಜಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ, ಗುಡ್ಡಗಾಡು ಬಡಜನರ ಅಭಿವೃದ್ಧಿ ವಿಷಯ, ಆಧ್ಯಾತ್ಮಿಕ ಸಮ್ಮೇಳನ ಹಾಗೂ ಸಹಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರೀಪಾದ ಆಚಾರ್ಯ
ಶ್ರೀಪಾದ ಪಿ.ಆಚಾರ್ಯ: 1980 ಜ.26ರಂದು ರೈತ ಕುಟುಂಬದಲ್ಲಿ ಜನಿಸಿದ ಶ್ರೀಪಾದ ಪಿ.ಆಚಾರ್ಯ ಅವರು 2019ರಲ್ಲಿ ವೃತ್ತಿ ಬದುಕಿಗೆ ವಿದಾಯ ಹೇಳಿ ಕೃಷಿಯತ್ತ ಮುಖ ಮಾಡಿದರು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಮಲ್ಲಿಗಹಳ್ಳಿಯಲ್ಲಿ ಕೃಷಿ ಜೀವನದೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. 4.5 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ವಿವಿಧ ಮರ, ಹಣ್ಣು ಗಿಡಗಳನ್ನು ಬೆಳೆಸಿ ಪರಿಸರ ಸ್ನೇಹಿ ತೋಟ ಮಾಡಿಕೊಂಡಿದ್ದಾರೆ. ಜತೆಗೆ ದೇಸಿ ಹಸುಗಳ ಪಾಲನೆ, ದೇಸಿ ಮಾರುಕಟ್ಟೆ ನಿರ್ಮಾಣ ಮಾಡಿದ್ದಾರೆ. ಜಿಲ್ಲೆಯಲ್ಲಿ 400 ಎಕರೆ ಪ್ರದೇಶದಲ್ಲಿ ಶ್ರೀಗಂಧ ಮರಗಳನ್ನು ನೆಡಿಸಿ ಕಾರ್ಯನಿರ್ವಹಣೆ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.