ಸರ್ವಕಾಲಕ್ಕೂ ಸಲ್ಲುವ ನಾಯಕ ಜಿ.ಮಾದೇಗೌಡ: ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅಭಿಮತ

DSC_0031
Published on
ಮಂಡ್ಯ: ಡಾ.ಜಿ.ಮಾದೇಗೌಡರು ಯಾರಿಗೂ ಹೆದರುತ್ತಿರಲಿಲ್ಲ. ಜತೆಗೆ ನೇರ ನುಡಿಗೆ ಹೆಸರುವಾಸಿಯಾದವರು. ಆದರೆ ಇವತ್ತಿನ ರಾಜಕಾರಣದಲ್ಲಿ ಆ ರೀತಿ ಹೆಸರು ಗಳಿಸುವವರು ವಿರಳ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರೂ ಆದ ಮಾಜಿ ಸಭಾಪತಿ ಬಿ‌.ಎಲ್.ಶಂಕರ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಜಿ.ಮಾದೇಗೌಡ ಪ್ರತಿಷ್ಠಾನದ ವತಿಯಿಂದ ಸೋಮವಾರ ಆಯೋಜಿಸಿದ್ದ 23ನೇ ವರ್ಷದ ರಾಜ್ಯಮಟ್ಟದ ಜಿ.ಮಾದೇಗೌಡ ಸಮಾಜ ಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಜಿ.ಮಾದೇಗೌಡರು ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು  ಮಾತನಾಡುತ್ತಿದ್ದರು. ಆದ್ದರಿಂದ ಸರ್ವಕಾಲಕ್ಕೂ ಸಲ್ಲುವ ಜನನಾಯಕ ಎಂದು ಬಣ್ಣಿಸಿದರು.
ಜಿ.ಮಾದೇಗೌಡರಿಗೆ ಮಹಾತ್ಮ ಗಾಂಧೀಜಿ ಅವರ ಬಗ್ಗೆ ವಿಶೇಷ ಪ್ರೀತಿ, ಬದ್ಧತೆ ಇತ್ತು. ಈ ಕಾರಣಕ್ಕೆ ಅವರು ಗಾಂಧಿಭವನ ಸ್ಥಾಪನೆ ಮಾಡಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುವ ಮೂಲಕ ಸ್ವಾವಲಂಬಿಗಳಾಗಿ ಬದುಕಲಿಕ್ಕೆ ಸಹಕಾರ ನೀಡಿದ್ದರು. ಮಾತ್ರವಲ್ಲದೆ 
ಗಾಂಧೀಜಿ ಅವರ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ಗೊತ್ತಾಗಲೆಂದು 20 ಎಕರೆ ಜಾಗವನ್ನು ಮಂಜೂರು ಮಾಡಿಸಿ ಗಾಂಧಿಗ್ರಾಮ ಸ್ಥಾಪನೆಗೆ ಮುಂದಾಗಿದ್ದರು. ಇಂತವರ ಹೆಸರಿನಲ್ಲಿ ಗಾಂಧಿವಾಧಿಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿ.ಮಾದೇಗೌಡ ಅವರು ರಾಜಕಾರಣದ ಜೊತೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡುವ ಮೂಲಕ ಸರ್ಕಾರ ಮಾಡುವು ದಕ್ಕಿಂತ  ಹೆಚ್ಚು ಕೆಲಸ ಮಾಡಿದ್ದಾರೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಹಾಗೂ ಮಾಜಿ ಸಭಾಪತಿ ಬಿ.ಎಲ್.ಶಂಕರ್ ತಿಳಿಸಿದರು.
ಕರ್ನಾಟಕದ ರಾಜಕಾರಣಕ್ಕೆ ಸುಧೀರ್ಘವಾದ ಇತಿಹಾಸವಿದೆ. 1962ರಲ್ಲಿ ರಾಜ್ಯ ರಾಜಕಾರಣದಲ್ಲಿ  ಮಂಡ್ಯ ಹಾಗೂ ಹಾಸನ ವಿಧಾನಸಭಾ ಹೊಸ ಆಯಾಮ ಸೃಷ್ಟಿ ಮಾಡಿದೆ. ಮಂಡ್ಯದಿಂದ ಎಸ್.ಎಂ. ಕೃಷ್ಣ ಹಾಗೂ ಡಾ.ಜಿ.ಮಾದೇಗೌಡ, ಹಾಸನ ವಿಧಾನಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡ ಅವರು ಆಯ್ಕೆಯಾಗಿ ಬಂದ ನಂತರ ಚಿರಸ್ಥಾಯಿಯಾಗಿ ಉಳಿಯುವ ಕೆಲಸ ಮಾಡಿದವರು. ಎಲ್ಲರೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಮಾದೇಗೌಡ ಅವರು ಕಂಡುಕೊಂಡ ದಾರಿ ಹೋರಾಟ. ಹಾಗೂ ರಾಜಕಾರಣದ ಜತೆ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿದವರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ,  ಶಾಸಕ ರವಿಕುಮಾರ್ ಗಣಿಗ, ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಪ್ರತಿಷ್ಠಾನ ಅಧ್ಯಕ್ಷ ಬಿ.ಬಸವರಾಜು, ಡಾ.ಜಿ.ಎಂ.ಪ್ರಕಾಶ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಮಂಡ್ಯದ ಪಶುವೈದ್ಯ ಡಾ. ಕೆ.ಎಸ್.ಜಯರಾಂ ಅವರಿಗೆ ಜಿ.ಮಾದೇಗೌಡ ಸಮಾಜ ಸೇವಾ ಪ್ರಶಸ್ತಿ ಮತ್ತು ಪಿರಿಯಾಪಟ್ಟಣ ತಾಲೂಕು ಕೆ.ಬಸವನಹಳ್ಳಿ ಪುಟ್ಟೇಗೌಡ ಅವರಿಗೆ ಸಾವಯವ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net