

ಹುಬ್ಬಳ್ಳಿ: ಪುಣೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 9ನೇ ಅಂತಾರಾಷ್ಟ್ರೀಯ ಮಧುಮೇಹ ತಜ್ಞರ ಸಮ್ಮೇಳನದಲ್ಲಿ (ಐಡಿಇಸಿ)ಹುಬ್ಬಳ್ಳಿಯ ಖ್ಯಾತ ಮಧುಮೇಹ ಹಾಗೂ ಹೃದ್ರೋಗ ತಜ್ಞ ಡಾ.ಜಿ.ಬಿ. ಸತ್ತೂರ ಅವರು ‘ಸ್ಥೂಲ ಕಾಯವು ಕಡಿಮೆಯಾದ ನಂತರ ಸ್ನಾಯುಗಳನ್ನು ಬಲಪಡಿಸುವುದು ಹೇಗೆ? ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
35ನೇ ವಯಸ್ಸಿನಲ್ಲಿಯೇ ಕೈ ಮತ್ತು ಕಾಲು ಸ್ನಾಯುಗಳ ಗಾತ್ರ ಹಾಗೂ ಕಾರ್ಯ ವೈಖರಿ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. 60 ಹಾಗೂ 70ನೇ ವಯಸ್ಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ನಾಯುಗಳು ಸವಿಯುತ್ತವೆ. ಹೀಗಾಗಿಯೇ ಅಂಥವರು ನಡೆಯುವಾಗ ಜೋಲಿ ಹೋಗುವುದು, ಬೀಳುವುದು ಸಾಮಾನ್ಯ ಎಂದರು.
ಈ ಸಮಸ್ಯೆ ಪರಿಹರಿಸಲು ಸಾಮರ್ಥ್ಯ ಮತ್ತು ಪ್ರತಿರೋಧ ತರಬೇತಿಯನ್ನು (ಸ್ಟ್ರೆಂಥ್ ಆ್ಯಂಡ್ ರೆಸಿಸ್ಟನ್ಸ್ ಎಕ್ಸರಸೈಸ್) ತಪ್ಪದೆ ಮಾಡುವುದು ಅಗತ್ಯ. ವಾರಕ್ಕೆ 5 ರಿಂದ 7 ದಿನದ ವಾಕಿಂಗ್ ಅಥವಾ ಇತರ ವ್ಯಾಯಾಮಗಳೊಂದಿಗೆ, ಈ ಪ್ರತಿರೋಧ ಮತ್ತು ಸಾಮರ್ಥ್ಯ ಹೆಚ್ಚಿಸುವ ವ್ಯಾಯಾಮವನ್ನು ವಾರಕ್ಕೆ 2ರಿಂದ 3 ದಿವಸ ಮಾಡಬೇಕು. ಇದಕ್ಕೆ ಡಂಬೆಲ್ಸ್ ಅಥವಾ ಸ್ಟ್ರೆಚ್ ಬಾಂಡ್ಸ್ ಉಪಯೋಗಿಸಬೇಕು. ಆಹಾರದಲ್ಲಿ ಅನ್ನದಂತಹ ಪಿಷ್ಟ ಪದಾರ್ಥಗಳನ್ನು ದಿನಕ್ಕೆ ಕೇವಲ ಒಂದು ಸಾರಿ ಸೇವಿಸಿ ಮತ್ತು ರಾತ್ರಿ ವೇಳೆ ಹೆಚ್ಚು ಬೇಳೆ, ಕಾಳುಯುಕ್ತ ಪದಾರ್ಥಗಳನ್ನು ಸೇವಿಸಬೇಕು. ಮಾಂಸಾಹಾರ ಸೇವಿಸುವ ವ್ಯಕ್ತಿಗಳು ವಾರಕ್ಕೆ 2 ಬಾರಿ ಚಿಕನ್ ಅಥವಾ ಮೀನು ತಿನ್ನಬಹುದು. ಕೆಂಪು ಮಾಂಸವನ್ನು ಕಡಿಮೆ ಸೇವಿಸಬೇಕು. ಮೊಟ್ಟೆಯು ಹೆಚ್ಚು ಪ್ರೊಟಿನ್‌ಯುಕ್ತವಾಗಿದ್ದು ಸೂಕ್ತ ಆಹಾರವೆಂದೇ ಪರಿಗಣಿಸಲಾಗಿದೆ ಎಂದು ಡಾ. ಸತ್ತೂರ ವಿವರಿಸಿದರು.
ಪುಣೆಯ ಡಾ. ಸಂಜಯ, ಬೆಳಗಾವಿಯ ಡಾ. ನೀತಾ ದೇಶಪಾಂಡೆ ಈ ಸಮ್ಮೇಳನದ ಮುಖ್ಯ ಆಯೋಜಕರಾಗಿದ್ದರು. ಸುಮಾರು 400ಕ್ಕಿಂತ ಹೆಚ್ಚು ತಜ್ಞ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.