

ಹುಬ್ಬಳ್ಳಿ: ಮುಂಬೈನಲ್ಲಿ ಇತ್ತೀಚೆಗೆ ಜರುಗಿದ 4ನೇ ಜಾಗತಿಕ ಹೃದಯ ಇಮೇಜಿಂಗ್ ಹಾಗೂ ಹೃದಯ ಕಾಯಿಲೆಗೆ ಸಂಬಂಧಪಟ್ಟ ಪರೀಕ್ಷೆ ವಿಧಾನಗಳ (ವರ್ಲ್ಡ್ ಕಾಂಗ್ರೆಸ್ ಆನ್ ಕಾರ್ಡಿಯಾಕ್ ಇಮೇಜಿಂಗ್ ಆಂಡ್ ಕ್ಲಿನಿಕಲ್ ಕಾರ್ಡಿಯಾಲಜಿ- ಡಬ್ಲೂಸಿಸಿಐಸಿಸಿ) ಕುರಿತ ಚಿಂತನೆ ಹಾಗೂ ಸರಣಿ ಕಾರ್ಯಕ್ರಮದಲ್ಲಿ ನಗರದ ಖ್ಯಾತ ಮಧುಮೇಹ ಹಾಗೂ ಹೃದ್ರೋಗ ತಜ್ಞ ಡಾ. ಜಿ.ಬಿ. ಸತ್ತೂರ ಭಾಗಿಯಾಗಿ ಉಪನ್ಯಾಸ ನೀಡಿದರು.
ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸಮ್ಮೇಳನದಲ್ಲಿ ದೇಶ ವಿದೇಶದಿಂದ 400ಕ್ಕೂ ಹೆಚ್ಚು ಹೃದಯ, ಮಧುಮೇಹ ತಜ್ಞರು ಭಾಗವಹಿಸಿದ್ದರು. ಇದು ಭಾರತದಲ್ಲಿಯೇ ಹೃದಯ ಸಂಬಂಧಿತ ಅತ್ಯುನ್ನತ ಸಮ್ಮೇಳನವಾಗಿದ್ದು, ಇದರಲ್ಲಿ ಡಾ. ಸತ್ತೂರ ಅವರು "ತಂಬಾಕು ಮತ್ತು ಹೃದಯಾಘಾತ' ಕುರಿತು ಮಾತನಾಡಿದರು.
ಬೀಡಿ ಹಾಗೂ ಸಿಗರೇಟ್ ಸೇವನೆಯನ್ನು ಹದಿಹರೆಯದ ವಯಸ್ಸಿನಲ್ಲಿ ಪ್ರಾರಂಭಿಸಿದಾಗ ಹೃದಯಾಘಾತ ಘಟನೆಗಳು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತವೆ. ಕಾಲುಗಳ ರಕ್ತ ಪರಿಚಲನೆ ಕುಂಠಿತ ಮತ್ತು ಹೃದಯಘಾತ ಕೂಡ ಸಾಮಾನ್ಯವಾಗುತ್ತವೆ. ಸಿಗರೇಟ್ ನಲ್ಲಿ 7 ಸಾವಿರಕ್ಕೂ ಹೆಚ್ಚು ಹಾನಿಕಾರಕ ರಾಸಾಯನಿಕ ಪದಾರ್ಥಗಳು ಇವೆ.
ಹೃದಯಾಘಾತದೊಂದಿಗೆ ಹೃದಯ ಬಡಿತ ಕೂಡ ಏರುಪೇರು ಆಗುವ ಸಾಧ್ಯತೆ ಇದೆ. ಮನೆಯಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ಸಿಗರೇಟ್ ಸೇದುವವರ ಜೊತೆ ಇರುವವರ ಹೃದಯಘಾತ ಪ್ರಮಾಣವು ಶೇ. 20 -30ರಷ್ಟು ಇರುತ್ತದೆ. (ಇದಕ್ಕೆ ಸೆಕಂಡ್ ಹ್ಯಾಂಡ್ ಸ್ಮೋಕ್ ಎನ್ನುತ್ತಾರೆ) ವಿಶೇಷವಾಗಿ ಮಕ್ಕಳಿಗೆ ಆಗುವ ಹಾನಿಯು ತೀರಾ ಹೆಚ್ಚು. ಅಧ್ಯಯನಗಳ ಪ್ರಕಾರ ಬೀಡಿ ಸಿಗರೇಟ್ ಸೇದುವವರಲ್ಲಿ ಹೃದಯಾಘಾತವು ಸಾಮಾನ್ಯರಿಗಿಂತ 3 ಪಟ್ಟು ಹೆಚ್ಚು ಎಂದು ಹೇಳಿದರು.
ಸಮಾಧಾನಕರ ವಿಷಯವೆಂದರೆ ಇತ್ತೀಚಿನ ಕೆಲ ಔಷಧಗಳು ಸಿಗರೇಟ್ ಚಟವನ್ನು ಬಿಡಿಸಲು ಲಭ್ಯವಿರುತ್ತವೆ. ಚಟಕ್ಕೆ ದಾಸರಾದವರು ನುರಿತ ವೈದ್ಯರು ಅಥವಾ ಮಾನಸಿಕ ತಜ್ಞರ ಸಲಹೆ ಪಡೆದು ಬಳಸಬಹುದು.
ಸಿಗರೇಟ್ ಸೇವನೆ ಬಿಟ್ಟು ದಶಕದ ನಂತರ ಅವರ ಆರೋಗ್ಯ ಸಾಮಾನ್ಯರಂತೆ ಆಗಲು ಪ್ರಾರಂಭಿಸುತ್ತದೆ. ನಿಯಮಿತವಾಗಿ ಬಿಪಿ, ಸಕ್ಕರೆ ಮತ್ತು ವಿವಿಧ ಕೊಲೆಸ್ಟ್ರಾಲ್ ಅಂಶಗಳನ್ನು (ಲಿಪಿಡ್ ಪ್ರೊಫೈಲ್) ಪರೀಕ್ಷಿಸಬೇಕೆಂದು ಸಲಹೆ ಮಾಡಿದರು.