

ಮಡಿಕೇರಿ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೃಹತ್ ಕೊಡುಗೆಯಾದ ವಚನಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ.ಫ.ಗು.ಹಳಕಟ್ಟಿ ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಪ್ರತಿಯೊಬ್ಬರಿಗೂ ಮಾದರಿ ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಉಪನ್ಯಾಸಕ ಮಾರುತಿ ದಾಸಣ್ಣವರ್ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ನಗರದ ಗಾಂಧಿಭವನದಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ಬುಧವಾರ ನಡೆದ ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಚನ ಸಂಶೋಧನೆ, ಸಂಗ್ರಹಣೆ, ಪರಿಷ್ಕರಣೆ, ಮುದ್ರಣ, ಪ್ರಕಾಶನ, ಪ್ರಚಾರ, ಪ್ರಸಾರ ಹಾಗೂ ಇಂಗ್ಲೀಷ್ ಭಾಷೆಗೆ ವಚನಗಳ ಅನುವಾದ ಇವುಗಳಲ್ಲಿ ತೊಡಗಿಸಿಕೊಂಡು ವಚನಗಳನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಟ್ಟರು. ವಚನ ಸಾಹಿತ್ಯ, ಅಂಕಣ ಬರಹಗಳು ಇಂತಹ ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿ ಪ್ರಕಟಿಸಿ, ನಾಡಿಗೆ ನೀಡಿದ ಡಾ.ಫ.ಗು.ಹಳಕಟ್ಟಿ ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.
ಶಿಕ್ಷಣ ನಂತರ ಆರಂಭದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂಗ್ರಹ ಹಾಗೂ ಮುದ್ರಣಕ್ಕಾಗಿಯೇ ವಕೀಲ ವೃತ್ತಿಯನ್ನು ಬಿಟ್ಟು ವಚನ ಸಂಗ್ರಹಕ್ಕೆ ಬದುಕು ಮೀಸಲಿಟ್ಟ ಧೀಮಂತ ಎಂದು ವರ್ಣಿಸಿದ ಅವರು, ಅನೇಕ ಬಾರಿ ಸೈಕಲ್ ಏರಿ ಊರೂರು ಅಲೆಯುವುದು, ತಾಳೆ ಗರಿ, ಓಲೆಕಟ್ಟುಗಳನ್ನು ಸಂಗ್ರಹಿಸಿ ಪುಸ್ತಕ ಮುದ್ರಣಕ್ಕೆ ಮುಂದಾದರು. ಇದರಿಂದ ಆರ್ಥಿಕ ತೊಂದರೆಗೂ ಸಿಲುಕಿದ್ದರು. ಆದರೂ ಯಾವುದನ್ನು ಲೆಕ್ಕಿಸದೆ ಜೀವನವನ್ನೇ ವಚನ ಸಾಹಿತ್ಯ ಸಂಗ್ರಹಕ್ಕೆ ಮೀಸಲಿಟ್ಟ ಅಪ್ರತಿಮ ಎಂದು ಮಾರುತಿ ದಾಸಣ್ಣವರ್ ನುಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿ, ೧೯೨೦ರ ಹೊತ್ತಿಗೆ ಒಂದು ಸಾವಿರ ವಚನಗಳ ಕಟ್ಟು ಸಂಗ್ರಹವಾಯಿತು. ಹೇಗಾದರೂ ಮಾಡಿ ಇದನ್ನು ಪ್ರಕಟಿಸಬೇಕೆಂದು ೫೦೦ ರೂ.ಗಳೊಂದಿಗೆ ಆ ಹಸ್ತಪ್ರತಿಯನ್ನು ಮಂಗಳೂರಿನ ಬಾಶೆಲ್ ಮಿಶನ್ ಮುದ್ರಣಕ್ಕೆ ಕಳಿಸಿದರು. ಅದುವರೆಗೆ ಕವಿ ಚರಿತೆಕಾರರು ಕೇವಲ ೫೦ ವಚನಕಾರರನ್ನು ಗುರುತಿಸಿದರು. ಫ.ಗು.ಹಳಕಟ್ಟಿಯವರು ೨೫೦ ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದರು. ಹಳಕಟ್ಟಿಯವರು ೧೯೨೫ ರಲ್ಲಿ ಇರುವ ಮನೆ ಮಾರಿ ಹಿತ ಚಿಂತಕ ಮುದ್ರಣಾಲಯ ಎಂಬ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿದರು ಎಂದು ತಿಳಿಸಿದರು.
ಹಳಕಟ್ಟಿಯವರು ಪತ್ರಿಕೋದ್ಯಮದಲ್ಲೂ ಗಣನೀಯವಾದ ಸೇವೆ ಸಲ್ಲಿಸಿದರು. ಅವರು ಆರಂಭಿಸಿದ ಶಿವಾನುಭವ ಎಂಬ ಮಾಸಿಕ ಪತ್ರಿಕೆ ೩೫ ವರ್ಷಗಳವರೆಗೆ ನಡೆದದ್ದು ಅದರ ಹೆಗ್ಗಳಿಕೆ. ಅಷ್ಟು ಮಾತ್ರವಲ್ಲದೇ ೧೯೨೫ ರಲ್ಲಿ ನವಕರ್ನಾಟಕ ಎಂಬ ವಾರ ಪತ್ರಿಕೆಯನ್ನು ಆರಂಭಿಸಿದರು. ಅವರು ಸಂಪಾದಿಸಿ ಪ್ರಕಟಿಸಿದ ವಚನ ಸಾಹಿತ್ಯ ಸಾರವಂತೂ ಅಪರೂಪ ವಚನಗಳುಳ್ಳ ಒಂದು ಅದ್ಭುತ ಕೃತಿ. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿ ವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ ಮುಂತಾದ ಅಮೂಲ್ಯ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟರು ಎಂದು ವಿವರಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ ಮಾತನಾಡಿ, ಕಾಯಕ, ದಾಸೋಹ ಮತ್ತು ಮಹಾಮನೆಗಳಂತಹ ಅಪೂರ್ವವಾದ ಪರಿಕಲ್ಪನೆಗನ್ನು ಮನುಷ್ಯನ ಜೀವನದಲ್ಲಿ ತಂದು ಬದುಕನ್ನೇ ಒಂದು ತಪಸ್ಸಾಗಿಸಿದವರು. ಇಂತಹ ಅಪೂರ್ವ ನಿಧಿಯನ್ನು ನಮಗೆ ಹುಡುಕಿ ಮೊಗೆ ಮೊಗೆದು ಕೊಟ್ಟವರೇ ನಮ್ಮ ಫ.ಗು.ಹಳಕಟ್ಟಿ ಎಂದು ನುಡಿದರು.
ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು. ವಚನ ಸಾಹಿತ್ಯದಿಂದ ನಾಡಿನ ಆಸ್ಮಿತೆ ತಿಳಿಯಲಿದೆ ಎಂದರು.
ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರೆ, ಬ್ಲಾಸಂ ಶಾಲೆಯ ವಿದ್ಯಾರ್ಥಿನೀಯರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.