

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿರಿಯ ಸಾಹಿತಿ, ಚಿಂತಕ ಡಾ. ಗುರುಲಿಂಗ ಕಾಪಸೆ ಹೆಸರಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಿದ್ಯಾರ್ಥಿಗಳು, ಮಕ್ಕಳು ಹಾಗೂ ಹಿತೈಷಿಗಳು ಸೇರಿ ದತ್ತಿ ಸ್ಥಾಪಿಸಿ, ಪ್ರತಿ ವರ್ಷ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಸಾಹಿತಿ ಡಾ. ಬಸವರಾಜ ಸಾದರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 11,21,111 ರೂ. ಮೊತ್ತವನ್ನು ನಿಶ್ಚಿತ ಠೇವಣಿ ಇಡಲಾಗಿದೆ. ಇದರಿಂದ ಪ್ರತಿವರ್ಷ ಬರುವ ಬಡ್ಡಿ ಹಣದಲ್ಲಿ "ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ' ಹಾಗೂ "ಡಾ. ಗುರುಲಿಂಗ ಕಾಪಸೆ ವಿದ್ಯಾರ್ಥಿ ಬಹುಮಾನ' ನೀಡಲಾಗುವುದು. ಏ. 2ರಂದು ಡಾ. ಗುರುಲಿಂಗ ಕಾಪಸೆ ಜನ್ಮದಿನವಿದ್ದು, ಆ ದಿನ ಸಂಘದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿಯನ್ನು ಪ್ರತಿವರ್ಷ ಇಬ್ಬರು ಸಾಹಿತಿಗಳಿಗೆ ತಲಾ 25 ಸಾವಿರ ರೂ. ನಗದು ಹಾಗೂ ಫಲಕ ನೀಡಲಾಗುವುದು. ಡಾ. ಗುರುಲಿಂಗ ಕಾಪಸೆ ವಿದ್ಯಾರ್ಥಿ ಬಹುಮಾನವನ್ನು ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರತಿವರ್ಷ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ 5 ಸಾವಿರ ರೂ. ನಗದು ನೀಡಿ ಗೌರವಿಸಲಾಗುವುದು ಎಂದರು.
ಈ ಪ್ರಶಸ್ತಿಗೆ ಸಾಹಿತಿಗಳ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪಡೆದವರನ್ನು ಈ ಪ್ರಶಸ್ತಿಗೆ ಪರಿಗಣಿಸುವುದಿಲ್ಲ. ಸೃಜನಶೀಲ, ವಿಮರ್ಶೆ, ಸಂಶೋಧನೆ, ಜಾನಪದ, ಮಕ್ಕಳ ಸಾಹಿತ್ಯ, ಮಹಿಳಾ ಸಾಹಿತ್ಯ ಹೀಗೆ ಯಾವುದೇ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯ ಬರಹಗಾರರನ್ನು ಪರಿಗಣಿಸಲು ನಿರ್ಧರಿಸಲಾಗಿದೆ ಎಂದರು.
ಡಾ. ವೀರಣ್ಣ ರಾಜೂರ, ಪ್ರೊ.ಜಿ.ಎ. ತಿಗಡಿ, ಇತರರು ಇದ್ದರು.