ಕೆಎಂಸಿಆರ್‌ಐ ನಿರ್ದೇಶಕರಾಗಿ ಡಾ. ಈಶ್ವರ ಹೊಸಮನಿ ನೇಮಕ

New Kims 789
Published on

ಹುಬ್ಬಳ್ಳಿ: ಇಲ್ಲಿನ ಕೆಎಂಸಿಆರ್‌ಐ ಪ್ರಭಾರಿ ನಿರ್ದೇಶಕರಾಗಿದ್ದ ಡಾ.ಎಸ್.ಎಫ್. ಕಮ್ಮಾರ ಅವರ ಸ್ಥಾನದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಈಶ್ವರ ಹೊಸಮನಿ ಅವರು ಪ್ರಭಾರಿಯಾಗಿ ನೇಮಕವಾಗಿದ್ದಾರೆ.

ಒಂದು ವರ್ಷ 7 ತಿಂಗಳವರೆಗೆ ಡಾ.ಎಸ್.ಎಫ್. ಕಮ್ಮಾರ ಅವರು ನಿರ್ದೇಶಕರಾಗಿದ್ದರು. ಈ ಜಾಗಕ್ಕೆ ಡಾ. ಈಶ್ವರ ಹೊಸಮನಿ ಹಾಗೂ ಡಾ. ಅರುಣಕುಮಾರ ಚವ್ಹಾಣ ಪೈಪೋಟಿ ನಡೆಸಿದ್ದರು. ಕಾಯಂ ನಿರ್ದೇಶಕರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಹಲವರು ದುಂಬಾಲು ಬಿದ್ದಿದ್ದರಾದರೂ ಜೇಷ್ಠತಾ ಪಟ್ಟಿಯನ್ವಯ ಡಾ. ಈಶ್ವರ ಹೊಸಮನಿ ಅವರನ್ನು ನೇಮಕ ಮಾಡಲಾಗಿದೆ ಎಂಬ ಹೇಳಲಾಗುತ್ತಿದೆ.

ಡಾ. ರಾಮಲಿಂಗಪ್ಪ ಅಂಟರತಾನಿ ಅವರು ಪ್ರಭಾರಿ ಸೇರಿ ಕಾಯಂ ಆಗಿ ಐದು ವರ್ಷ ನಿರ್ದೇಶಕರಾಗಿದ್ದರು. ಅವರ ಅವಧಿಯ ನಂತರ ಡಾ.ಎಸ್.ಎಫ್. ಕಮ್ಮಾರ ಅವರನ್ನು ಪ್ರಭಾರಿಯಾಗಿ ನೇಮಕ ಮಾಡಲಾಗಿತ್ತು. ಜೇಷ್ಠತಾ ಪಟ್ಟಿ ಅನ್ವಯ ಡಾ. ಗುರುಶಾಂತಪ್ಪ ಯಲಗಚ್ಚಿನ, ಡಾ. ಈಶ್ವರ ಹೊಸಮನಿ, ಡಾ.ಜಿ.ಸಿ. ಪಾಟೀಲ ಇತರರು ಸರತಿಯಲ್ಲಿದ್ದರು. ಆದರೂ ಪ್ರಭಾರಿಗೆ ಜೇಷ್ಠತೆ ಅನ್ವಯವಾಗುವುದಿಲ್ಲವೆಂದು ತೀರ್ಮಾನಿಸಿ ಡಾ. ಕಮ್ಮಾರ ನೇಮಕವಾಗಿದ್ದರು. ಈಗಲೂ ಪ್ರಭಾರಿಯಾಗಿ ನೇಮಕಗೊಂಡಿರುವ ಡಾ. ಈಶ್ವರ ಹೊಸಮನಿ ಜೇಷ್ಠತಾ ಪಟ್ಟಿಯಲ್ಲಿ ಅಗ್ರರಾಗಿದ್ದಾರೆ. ಇವರ ಅವಧಿ 2026ರ ಮೇ 31ರಂದು ಮುಗಿದು ನಿವೃತ್ತಿ ಆಗಲಿದ್ದಾರೆ. ಇದಾದ ಬಳಿಕವೇ ಕಾಯಂ ನಿರ್ದೇಶಕರನ್ನು ನೇಮಕ ಮಾಡುವ ಉದ್ದೇಶ ಸರ್ಕಾರ ಹೊಂದಿದಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net