

ಮೈಸೂರು: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಲಭಿಸಿರುವುದು ಕೋಟ್ಯಂತರ ಭಾರತೀಯರಿಗೆ ಅತೀವ ಹರ್ಷವನ್ನುಂಟು ಮಾಡಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದ್ದಾರೆ.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆಗಾಗಿ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡ ತಪಸ್ವೀ ರಾಜಕಾರಣಿ, ಬಿಜೆಪಿ ಕಂಡ ಶ್ರೇಷ್ಠ ನೇತಾರ ಲಾಲ್ ಕೃಷ್ಣ ಅಡ್ವಾಣಿ ಅವರು ತಮ್ಮ ಸಾಧನೆ ಹಾಗೂ ಹೋರಾಟಕ್ಕೆ ಅವರ ಜೀವತಾವಧಿಯಲ್ಲೇ ಭಾರತರತ್ನ ಪಡೆಯುತ್ತಿರುವುದು ವಿಶೇಷವಾಗಿದೆ. ಇಂಥಾ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಅನಂತ ಧನ್ಯವಾದಗಳನ್ನೂ ಸಲ್ಲಿಸುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಯೋಧ್ಯೆಯ ರಾಮನಿಗಾಗಿ ರಥಯಾತ್ರೆ ನಡೆಸಿ, ಭಾರತೀಯರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ್ದ ಆಧ್ಯಾತ್ಮಿಕ ಚಿಂತಕರೂ ಆದ ಅಡ್ವಾಣಿ ಅವರು ಸರ್ವೋಚ್ಛ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿದ್ದು, ಭಾರತದ ಪರಂಪರೆಗೆ ಸಂದ ಮಹಾನ್ ಗೌರವವಾಗಿದೆ ಎಂದು ತಿಳಿಸಿದ್ದಾರೆ.