

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷಿಯಾಗಿರುವ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಇದೀಗ ’ಕಾಗದ ರಹಿತ’ ಪ್ರಥಮ ಆಸ್ಪತ್ರೆಯಾಗಿ ಮಾರ್ಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ತಿಳಿಸಿದರು.
ನಗರದ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ರಕ್ಷಣೆಯಲ್ಲಿ ಮಹತ್ತರ ಹೆಜ್ಜೆ ಇಟ್ಟಿದ್ದು, ಡಿಜಿಟಲ್‌ಗೆ ರೂಪಾಂತರಗೊಂಡು ಸಂಪೂರ್ಣವಾಗಿ ಕಾಗದ ರಹಿತ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಕಾಗದ ರಹಿತ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ ಎಂದರು.
ಪ್ರತಿವರ್ಷ ಅಂದಾಜು 50 ಸಾವಿರ ರೋಗಿಗಳ ದಾಖಲೆ ನಿರ್ವಹಿಸುವ ಆಸ್ಪತ್ರೆಯಲ್ಲಿ 10 ರಿಂದ 12.5 ಮಿಲಿಯನ್ ಪುಟ ಕಾಗದ ಉಳಿಸಲಾಗುತ್ತಿದೆ. ಕಾಗದ ಬಳಕೆ ನಿಲ್ಲಿಸಿದ್ದರಿಂದ 1,250 ರಿಂದ 1,500 ಮರಗಳನ್ನು ಸಂರಕ್ಷಣೆ ಮಾಡಿದಂತಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ಬೇಡಿಕೆ ಅನ್ವಯ ದಾಖಲೆಗಳನ್ನು ಎರಡು ಮಾದರಿಯಲ್ಲಿ ನೀಡಲಾಗುತ್ತಿದೆ. ಡಿಜಿಟಲ್ ರೂಪದಲ್ಲಿ ಕೇಳಿದರೆ ನೇರವಾಗಿ ವಾಟ್ಸಪ್, ಇಮೇಲ್‌ಗಳಿಗೆ ಕಳುಹಿಸಲಾಗುವುದು. ಕಾಗದ ರೂಪದಲ್ಲಿ ಕೇಳಿದರೂ ದಾಖಲೆ ನೀಡಲಾಗುವುದು ಎಂದರು.
ಮುಂಬೈ ಮೂಲದ ಪ್ರೆಸ್ಕೊ ಪೇಪರ್‌ಲೆಸ್ ಸೊಲ್ಯೂಷನ್ ಕಂಪನಿಯ ಸಹಕಾರದಿಂದ ಸಂಪೂರ್ಣ ಕಾಗದ ರಹಿತ ಆಸ್ಪತ್ರೆಯಲ್ಲಿ ಎಲ್ಲ ವೈದ್ಯಕೀಯ, ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳು ಡಿಜಟಲೀಕರಣಗೊಳಿಸಲಾಗಿದೆ. ಈ ಕಾರ್ಯ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ ಅನುಗುಣವಾಗಿ ಮಾಡಲಾಗಿದ್ದು, ರೋಗಿಗಳ ಮಾಹಿತಿ ಗೌಪ್ಯತೆ ಮತ್ತು ಸೈಬರ್ ಭದ್ರತೆ ಕಾಪಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಕ್ಲಿನಿಕಲ್ ಸರ್ವಿಸ್ ನಿರ್ದೇಶಕ ಡಾ.ಮಾಧವ ಪ್ರಭು, ಪ್ರೆಸ್ಕೊ ಪೇಪರ್‌ಲೆಸ್ ಸೊಲ್ಯೂಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಂ ಥೋಟ್ರೆ ಇತರರಿದ್ದರು.
ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಕಾಗದು ರಹಿತ ಆಸ್ಪತ್ರೆಯನ್ನಾಗಿ ಮಾಡಬೇಕು ಎನ್ನುವುದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಕಾರ ಕೋರೆ ಅವರ ಕನಸಲಾಗಿತ್ತು. ಅವರ ಮಾರ್ಗದರ್ಶನದಲ್ಲಿ ಇವತ್ತು ಆಸ್ಪತ್ರೆ ಸಂಪೂರ್ಣ ಕಾಗದು ರಹಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ನಿರ್ದೇಶಕ ಅಮಿತ್ ಕೋರೆ ದೂರದೃಷ್ಟಿ ಫಲವಾಗಿ ಆಸ್ಪತ್ರೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.