

ಮೈಸೂರು: ನಗರದ ಎಂಎಂಕೆ ಮತ್ತು ಎಸ್‌ಡಿಎಂ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಎಸ್‌ಡಿಎಂಇ ಸೊಸೈಟಿ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ 76ನೇ ಜನ್ಮದಿನ ಆಚರಿಸಲಾಯಿತು.
ಮಾನಸಗಂಗೋತ್ರಿಯ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಎಸ್. ಪದ್ಮಾ ಮಾತನಾಡಿ, ವೀರೇಂದ್ರ ಹೆಗ್ಗಡೆ ನಾಡು ಕಂಡ ಶ್ರೇಷ್ಠ ವ್ಯಕ್ತಿ. ಅವರು ಶುಭ್ರ ವಸ್ತ್ರದ, ಸರಳ ವ್ಯಕ್ತಿತ್ವದ, ಸೂಕ್ಷ್ಮ ಮನಸ್ಸಿನ ಧಾರ್ಮಿಕ ಮುಖಂಡ ಎಂದು ಬಣ್ಣಿಸಿದರು.
ನಡೆದಾಡುವ ಮಂಜುನಾಥನೆಂದೇ ಖ್ಯಾತಿ ಹೊಂದಿರುವ ವೀರೇಂದ್ರ ಹೆಗ್ಗಡೆ ಅವರು ಸಾಮಾಜಿಕ ಸೇವೆ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಉದ್ಯೋಗ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದ್ದಾರೆ. ಆಧುನಿಕ ಮನೋಭಾವದ ಇವರು ಪ್ರಗತಿಯ ನೇತಾರರು ಎಂದರು.
ಪ್ರಾಂಶುಪಾಲರಾದ ನಯನಕುಮಾರಿ ಮಾತನಾಡಿ, ಪೂಜ್ಯ ಖಾವಂದರ ಶಿಸ್ತು, ಶುಭ್ರತೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೇ ಜೆ.ಎಸ್.ವಿಜಯಶ್ರೀ, ಹಿರಿಯ ಉಪನ್ಯಾಸಕ ಬಿ.ಟಿ.ನಂದಿನಿ, ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಡಾ.ಓ.ಎಲ್. ಸುಮಾ ಉಪಸ್ಥಿತರಿದ್ದರು.