ಭಗವಂತನ ಸೇವೆಗಿರುವ ಅವಕಾಶವೇ ಪರ್ಯಾಯ

Shirooru Lead
Published on

ಡಾ. ಡಿ.ವೀರೇಂದ್ರ ಹೆಗ್ಗಡೆ ಅಭಿಮತ

ಶಿರೂರು ಮಠದ ಪೂರ್ವಭಾವಿ ಸಭೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ ಶ್ರೀಕೃಷ್ಣನ ಪರ್ಯಾಯವೆಂದರೆ ಅದು ಎಲ್ಲರ ಪರ್ಯಾಯ. ಇದು ಅವರ ಮಠ, ಇವರ ಮಠ ಎಂದೆಣಿಸದೆ ಇದು ನಮ್ಮ ಪರ್ಯಾಯವೆಂಬ ಭಾವದೊಂದಿಗೆ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಳ್ಳಬೇಕು. ಎಷ್ಟು ದಿನ ಬದುಕಿರುತ್ತೇವೆಂದು ಯಾರಿಗೂ ತಿಳಿದಿಲ್ಲ. ಭಗವಂತನೇ ಕೊಟ್ಟ ಸಂಪತ್ತು ಈ ದೇಹ. ಹೀಗಾಗಿ ಆತನ ಸೇವೆ ಮಾಡಲು ನಮಗೆಲ್ಲ ಲಭಿಸಿರುವ ಅವಕಾಶವೇ ಈ ಪರ್ಯಾಯ. ಗಳಿಕೆ ಮಾಡಿದ್ದರಲ್ಲಿ ಕಿಂಚಿತ್ತಾದರೂ ಕೃಷ್ಣನ ಸೇವೆಗೆ ನೀಡೋಣ ಎಂದು ಧರ್ಮಸ್ಥಳದ ಧಮಾರ್ಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದರು.

ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ (ನ.7) ಆಯೋಜಿಸಿದ್ದ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ 2026-28ನೇ ಸಾಲಿನಲ್ಲಿ ನಡೆಯಲಿರುವ ಪ್ರಥಮ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಭಕ್ತರ ವಸತಿಗೆ ಅವಕಾಶ

Shirooru 2
ಹೊರೆಗಾಣಿಕೆ ಎಂದರೆ ಅದು ಹೊರೆ ಎಂದರ್ಥವಲ್ಲ. ಭಗವಂತನ ಸೇವೆ ಮಾಡಲು ನಮಗೆಲ್ಲ ಲಭಿಸಿದ ಅವಕಾಶ. ಒಂದು ಎಳನೀರು ಕೊಟ್ಟರೂ ಸಹ ಕಾಣಿಕೆಯೇ ಆಗುತ್ತದೆ. ಪರ್ಯಾಯದ ಸಂದರ್ಭದಲ್ಲಿ ಬರುವ ಭಕ್ತರಿಗೆ ವಸತಿ ಸಮಸ್ಯೆಯಾಗುತ್ತದೆ. ಹೀಗಾಗಿ ಉಡುಪಿಯ ಎಸ್​ಡಿಎಂ ಆಯುರ್ವೇದ ಕಾಲೇಜಿನಲ್ಲಿ ಹೊಸದಾಗಿ ನಿರ್ಮಿಸಿರುವ ಬ್ಲಾಕ್​ಗಳನ್ನು ವಸತಿಗಾಗಿಯೇ ಕಾಯ್ದಿರಿಸಲಾಗುವುದು ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು.

ಮನೆ ಮನೆಗೆ ಆಮಂತ್ರಣ

Yashpal
ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಅಷ್ಟ ಮಠಗಳಲ್ಲಿ ಶಿರೂರು ಮಠದ ವೇದವರ್ಧನ ಶ್ರೀಗಳು ಅತ್ಯಂತ ಕಿರಿಯರು. ಅವರ ಪ್ರಥಮ ಪರ್ಯಾಯವನ್ನು ಅದ್ದೂರಿಯಾಗಿ ಹಾಗೂ ಐತಿಹಾಸಿಕವಾಗಿ ಆಚರಿಸಲು ಸಿದ್ಧತೆ ಮಾಡುತ್ತಿದ್ದೇವೆ. ಶಿರೂರು ಪರ್ಯಾಯ-ನಮ್ಮ ಪರ್ಯಾಯ ಎಂಬ ಘೋಷಣೆಯೊಂದಿಗೆ ಪ್ರಥಮ ಹಂತದಲ್ಲಿ 2 ಲಕ್ಷ ಆಮಂತ್ರಣ ಮುದ್ರಿಸಲಾಗಿದೆ. ಮನೆ ಮನೆಗೂ ಆಮಂತ್ರಣ ತಲುಪಿಸಲಾಗುವುದು. ಕೃಷ್ಣನ ಎಲ್ಲ ಭಕ್ತರೂ ಸಹಕರಿಸಬೇಕು ಎಂದರು.

ವಿಶ್ವ ಹಿಂದು ಪರಿಷತ್​ನ ಪ್ರಾಂತ್ಯ ಅಧ್ಯಕ್ಷ ಎಂ.ಬಿ. ಪುರಾಣಿಕ್​, ಅರುಣಕುಮಾರ್​ ಪುತ್ತಿಲ ಮಾತನಾಡಿದರು.

Sabhe
ವೇದಿಕೆಯಲ್ಲಿ ಕುಂದಾಪುರ ಶಾಸಕ ಕಿರಣಕುಮಾರ್​ ಕೊಡ್ಗಿ, ಕಾರ್ಕಳ ಶಾಸಕ ವಿ.ಸುನೀಲಕುಮಾರ್​, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ.ರಘುಪತಿ ಭಟ್​, ಕಟೀಲು ಕ್ಷೇತ್ರದ ಗೋಪಾಲಕೃಷ್ಣ ಆಸ್ರಣ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೊರೂರು, ಹರಿಯಪ್ಪ ಕೋಟ್ಯಾನ್​, ಪ್ರದಿಪಕುಮಾರ್​ ಕಲ್ಕೂರು, ಹರಿಕೃಷ್ಣ ಪುನರೂರು, ಉದಯಕುಮಾರ್​ ಶೆಟ್ಟಿ ಮುನಿಯಾಲು, ಪುರುಷೋತ್ತಮ ಶೆಟ್ಟಿ, ಧನಂಜಯ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಎಂ.ಬಿ. ಪರಾಣಿಕ್​, ಗಣೇಶ ರಾವ್​, ಮಹೇಶ ಅಂಚನ್​, ನಾರಾಯಣ ಕರ್ಕೇರ, ಬಿ.ಎಂ.ಶಂಕರ ಪೂಜಾರಿ, ವಿಷ್ಣುಮೂರ್ತಿ ಆಚಾರ್ಯ, ಪ್ರಸಾದ ರಾಜ್​ ಕಾಂಚನ್​, ಆನಂದ ಪಿ. ಸುವರ್ಣ, ಕರ್ನಾಟಕ ಬ್ಯಾಂಕ್​ನ ಪ್ರಾದೇಶಿಕ ಮೆನೇಜರ್​ ರಮೇಶ್​ ವೈದ್ಯ ಇತರರು ಉಪಸ್ಥಿತರಿದ್ದರು.

ವಿದುಷಿ ಸುರೇಖಾ ಭಟ್​ ಪ್ರಾರ್ಥಿಸಿದರು. ಪರ್ಯಾಯ ಸಮಿತಿಯ ಸಂಚಾಲಕ ಸುಪ್ರಸಾದ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಜಯಪ್ರಕಾಶ ಕೆದ್ಲಾಯ ವಂದಿಸಿದರು. ವಿದ್ವಾನ್​ ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರ್ವಹಿಸಿದರು.

ಭಕ್ತ ವತ್ಸಲನಿಗೆ ಪ್ರೀತಿ ನೀಡೋಣ

BOX
ಶಿರೂರು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ಮಾತನಾಡಿ, ಶ್ರೀಕೃಷ್ಣನಿಗೆ ಬೇಕಿರುವುದು ಪ್ರೀತಿ ಮಾತ್ರ. ಆತ ಭಕ್ತ ವತ್ಸಲ. ಭಕ್ತರು ಏನನ್ನಾದರೂ ಕೊಡಬಹುದು. ಭಾವ ಪ್ರಧಾನವೇ ಹೊರತು ಬೇರೇನೂ ಇಲ್ಲ ಎಂಬ ಹಿನ್ನೆಲೆಯಲ್ಲಿ ಆಚಾರ್ಯ ಮಧ್ವರು ಹೊರೆಗಾಣಿಕೆ ಪದ್ಧತಿ ಆರಂಭಿಸಿದರು. ಅನ್ನಬ್ರಹ್ಮನಾದ ಕೃಷ್ಣನಿಗೆ ಕಿಂಚಿತ್​ ಏನನ್ನಾದರೂ ಸಮರ್ಪಿಸೋಣ. ಆತನ ಭಕ್ತರೆಲ್ಲ ಶಿರೂರು ಪರ್ಯಾಯಕ್ಕೆ ಬಂದು ಪ್ರಾಣದೇವರ ಪ್ರಸಾದ ಸ್ವೀಕರಿಸಬೇಕು ಎಂದರು.

ಉಡುಪಿಯ ಅಷ್ಟಮಠ ಎಲ್ಲ ವರ್ಗಕ್ಕೂ ಸೇರಿದೆ ಎನ್ನುವುದನ್ನು ಎಲ್ಲ ಶ್ರೀಪಾದರು ಪ್ರತಿಪಾದಿಸುತ್ತಲೇ ಇದ್ದಾರೆ. ಶಿರೂರು ಮಠದ ಹಿಂದಿನ ಪರ್ಯಾಯದಲ್ಲಿ ಲಕ್ಷ್ಮೀವರ ಶ್ರೀಗಳು ಸ್ವಾಗತ ಸಮಿತಿಗೆ ಬ್ರಾಹ್ಮಣ ವರ್ಗದ ರಘುಪತಿ ಭಟ್ ಹಾಗೂ ಶೂದ್ರ ವರ್ಗದ ನನ್ನನ್ನು ಅಧ್ಯಕ್ಷರನ್ನಾಗಿಸಿ ಮಾದರಿಯಾಗಿದ್ದರು. ಈ ಬಾರಿಯೂ ಶೂದ್ರ ಸಮಾಜದ ಯಶ್​ಪಾಲ್​ ಸುವರ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವ ವೇದವರ್ಧನ ಶ್ರೀಗಳು ಸಮಾಜಕ್ಕೆ ಧನಾತ್ಮಕ ಸಂದೇಶ ರವಾನಿಸಿದ್ದಾರೆ. ಶಿರೂರು ಪರ್ಯಾಯಕ್ಕೆ ಎಲ್ಲ ವರ್ಗದವರೂ ಸಹಕರಿಸೋಣ. | ಪ್ರಮೋದ್​ ಮಧ್ವರಾಜ್​. ಮಾಜಿ ಸಚಿವ

ಸಭಾ ಕಾರ್ಯಕ್ರಮಕ್ಕೂ ಮೊದಲು ವಿದುಷಿ ಶಶಿಕಲಾ ಎಸ್​, ಭಟ್​ ತಂಡದಿಂದ ನಡೆದ ವೀಣಾ ವಾದನ ಸಭಿಕರ ಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net