

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 77ನೇ ಜನ್ಮದಿನದ ಅಂಗವಾಗಿ ಮೊದಲು ನೋಂದಣಿ ಮಾಡಿಕೊಂಡ 100 ರೋಗಿಗಳಿಗೆ ಉಚಿತವಾಗಿ ಎಂಜಿಯೋಗ್ರಾಫಿ ಮತ್ತು ಆಯ್ದ 25 ಜನರಿಗೆ ಎಂಜಿಯೋಪ್ಲಾಸ್ಟಿ ನೆರವೇರಿಸಲಾಗುವುದು ಎಂದು ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ. ಎಂ. ದಯಾನಂದ ತಿಳಿಸಿದರು.
ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಹೃದಯ ಸಂಬಂಧಿ ರೋಗಗಳು ಉಲ್ಬಣವಾಗುತ್ತಿವೆ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧವರೆಗೂ ಹೃದಯಾಘಾತವಾಗುತ್ತಿದೆ. ಕರೊನಾ ಬಳಿಕ ಅತ್ಯಧಿಕವಾಗಿ ಹೃದಯ ರೋಗಗಳು ಕಂಡುಬರುತ್ತಿವೆ. ಡಾ. ಪ್ರಭಾಕರ ಕೋರೆ ಅವರ ಜನ್ಮದಿನದ ಅಂಗವಾಗಿ ಕೆಎಲ್‌ಇ ಆಸ್ಪತ್ರೆಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಸರ್ಕಾರದ ಯಾವುದೇ ವೈದ್ಯಕೀಯ ಯೋಜನೆಗೆ ಒಳಪಡದ ರೋಗಿಗಳಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ರೋಗಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೋಗಿಗಳು ಕಡಿಮೆ ರಕ್ತದೊತ್ತಡ, ಕಿಡ್ನಿ, ಲಿವರ್ ಹಾಗೂ ನರರೋಗದಿಂದ ಬಳಲುತ್ತಿರಬಾರದು. ಅವಶ್ಯವಿರುವ ರೋಗಿಗಳಿಗೆ ಕೇವಲ 1 ಸ್ಟಂಟ್ ಮಾತ್ರ ಅಳವಡಿಸಲಾಗುವುದು. ಹೃದಯದಲ್ಲಿ ಒಂದಕ್ಕಿಂತ ಹೆಚ್ಚು ಬ್ಲಾಕ್‌ಗಳಿದ್ದರೆ ಅವರಿಗೆ ಸ್ಟಂಟ್ ಹಾಕಲಾಗುವುದಿಲ್ಲ. ಆಧಾರ್, ರೇಶನ್, ಪಾನ್ ಕಾರ್ಡ್ ಕಡ್ಡಾಯ. ಈ ಉಚಿತ ವೈದ್ಯಕೀಯ ಸೌಲಭ್ಯದಲ್ಲಿ ಯಾವುದೇ ಆರೋಗ್ಯ ಯೋಜನೆ, ವಿಮಾ ಯೋಜನೆಗಳನ್ನು ಸೇರಿಸುವುದಿಲ್ಲ. ಆಗಸ್ಟ್ ಒಂದು ತಿಂಗಳ ಅವಧಿವರೆಗೆ ಈ ಸೌಲಭ್ಯ ಇರಲಿದೆ ಎಂದರು.
ಅತಿ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ ಹೆಗ್ಗಳಿಕೆ:
ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಹೃದ್ರೋಗಕ್ಕೆ ಸಮಗ್ರ ಮತ್ತು ಸುಸಜ್ಜಿತ ಚಿಕಿತ್ಸೆ ನೀಡುವುದಕ್ಕಾಗಿ 1997ರಲ್ಲಿ ಅತ್ಯಂತ ಅನುಭವಿ ತಜ್ಞವೈದ್ಯರ ಮೂಲಕ ಹೃದ್ರೋಗ ವಿಭಾಗವನ್ನು ಕೆಎಲ್‌ಇ ಆಸ್ಪತ್ರೆಯಲ್ಲಿ ಪ್ರಾರಂಭಿಸಿದರೆ, 2000ರಲ್ಲಿ ಕ್ಯಾಥ್‌ಲ್ಯಾಬ್ ಅಳವಡಿಸಿ ಹೃದಯರೋಗ ಚಿಕಿತ್ಸಾ ಪ್ರಕ್ರಿಯೆ ಆರಂಭಿಸಲಾಯಿತು. ಇಲ್ಲಿಯವರೆಗೆ 1.50 ಲಕ್ಷ ಎಂಜಿಯೋಗ್ರಾಫಿ ಹಾಗೂ ಎಂಜಿಯೋಪ್ಲಾಸ್ಟಿ ನೆರವೇರಿಸಲಾಗಿದೆ. ಈ ಭಾಗದಲ್ಲಿ ಅತಿ ಹೆಚ್ಚು ಜನರ ಹೃದಯಕ್ಕೆ ಚಿಕಿತ್ಸೆ ನೀಡಿರುವುದು ನಮ್ಮ ಹೆಗ್ಗಳಿಕೆ ಎಂದು ಡಾ.ಎಂ.ದಯಾನಂದ ತಿಳಿಸಿದರು.
ಡಾ. ಪ್ರಭಾಕರ ಕೋರೆ ಅವರ ಜನ್ಮದಿನದ ಅಂಗವಾಗಿ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು. ಮಾಹಿತಿಗಾಗಿ ದೂ. 0831-2473777, ಮೊ.9972337346ಗೆ ಸಂಪರ್ಕಿಸುವಂತೆ ತಿಳಿಸಿದರು.
ಆಸ್ಪತ್ರೆಯ ಹೃದಯರೋಗ ವಿಭಾಗ ಮುಖ್ಯಸ್ಥ ಡಾ. ಸಂಜಯ ಪೋರವಾಲ, ಹಿರಿಯ ಹೃದ್ರೋಗ ತಜ್ಞವೈದ್ಯ ಡಾ. ಸುರೇಶ ಪಟ್ಟೇದ, ಡಾ. ಆರ್.ಬಿ. ನೇರ್ಲಿ, ಡಾ. ರಾಜಶೇಖರ ಸೋಮನಟ್ಟಿ, ಡಾ. ಸಮೀರ ಅಂಬರ, ಡಾ. ಪ್ರಸಾದ ಎಂ.ಆರ್., ಡಾ. ವಿಶ್ವನಾಥ ಹೆಸರೂರ ಸುದ್ದಿಗೋಷ್ಠಿಯಲ್ಲಿದ್ದರು.