ಮಹಾತ್ಮರು ಒಂದೇ ಸಮಾಜಕ್ಕೆ ಸಿಮೀತರಲ್ಲ

Dr. Channasiddharama Panditaradhya Shivacharya Sri, Srishaila Jagadguru, Addapallakki Mahotsava, Basava Purana Mahamangala, Dharma Sabha, Basavanbagewadi,
ಬಸವನಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿ ಬಸವಪುರಾಣ ಮಹಾಮಂಗಲ, ಧರ್ಮಸಭೆಯಲ್ಲಿ ಶ್ರೀಶೈಲ ಪೀಠದ ಜಗದ್ಗುರು 1008 ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ಶಾಸಕ ರಾಜುಗೌಡ ಪಾಟೀಲ, ಶಿವಪ್ರಕಾಶ ಶಿವಾಚಾರ್ಯರು, ಶಿವಕುಮಾರ ಶ್ರೀಗಳು ಇತರರಿದ್ದರು.
Published on

ಬಸವನಬಾಗೇವಾಡಿ: ಬಸವಣ್ಣನವರು ಕೇವಲ ವಿರಕ್ತಮಠಗಳ ಆಸ್ತಿಯಲ್ಲ, ಬದಲಾಗಿ ಸಕಲ ಮಠಗಳ ಆಸ್ತಿಯಾಗಿದ್ದಾರೆ ಎಂದು ಶ್ರೀಶೈಲ ಪೀಠದ ಜಗದ್ಗುರು 1008 ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.

ತಾಲೂಕಿನ ಕಣಕಾಲ ಗ್ರಾಮದಲ್ಲಿ ಮಂಗಳವಾರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿದ ನಂತರ ಮಡಿವಾಳೇಶ್ವರ ಮಠದ ಆವರಣದಲ್ಲಿ ಬಸವ ಪುರಾಣ ಮಹಾಮಂಗಲ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಹಾತ್ಮರು ಯಾವುದೇ ಒಂದು ಸಮಾಜಕ್ಕೆ ಸಿಮೀತರಾಗಿಲ್ಲ. ಆದರೆ ಅವರನ್ನು ಒಂದು ಸಮಾಜಕ್ಕೆ ಸಿಮೀತವಾಗಿ ಮಾಡಲಾಗುತ್ತಿದೆ. ಬ್ರಾಹ್ಮಣ ಸಮಾಜದಲ್ಲಿ ಜನಿಸಿದ ಬಸವಣ್ಣ ಅವರು ಬ್ರಾಹ್ಮಣ ಸಮಾಜದ ಆಚಾರ ವಿಚಾರಗಳನ್ನು ಧಿಕ್ಕರಿಸಿ ವೀರಶೈವ ಧರ್ಮವನ್ನು ಸ್ವೀಕರಿಸಿ ತದನಂತರ ವೀರಶೈವ ಧರ್ಮವನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.

ವಾಲ್ಮೀಕಿ ಮಹರ್ಷಿಗಳು ರಾಮಾಯಣ ಬರೆದರು. ಕಾವ್ಯ ಪುರಾಣ, ಮಹಾಭಾರತ ಹೀಗೆ ಅನೇಕ 18 ಪುರಾಣಗಳಿವೆ. ಶರಣರು, ಸಂತರು ಮಹಾತ್ಮರ ಪುರಾಣಗಳು ರಚಿಸಿದ್ದಾರೆ. ಬಸವ ಪುರಾಣವನ್ನು ಭೀಮ ಕವಿಗಳು ಕನ್ನಡದಲ್ಲಿ ವ್ಯಾಕರಣ ಮಾಡಿದ್ದಾರೆ ಎಂದು ಹೇಳಿದರು.

ಬಸವಣ್ಣನವರು ಯಾವುದೇ ಜಾತಿ ಮತ ಪಂಥಕ್ಕೆ ಸಿಮೀತವಾಗದೆ ಲಿಂಗ ಧರಿಸಿರುವವರನ್ನು ತಮ್ಮೊಂದಿಗೆ ಕೊಂಡೊಯ್ದರು. ಸಕಲ ಧರ್ಮಕ್ಕೆ ಉತ್ತಮ ತತ್ವವನ್ನು ಸಾರಿದ ಪುರಷರ ಆಚಾರ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಕೆಲವು ಮಠಾಧೀಶರು, ರಾಜಕಾರಣಿಗಳು ಅವರು ಬೇರೆ-ಇವರು ಬೇರೆ ಎಂದು ಹೇಳುವುದರಿಂದ ಮಹಾತ್ಮರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಹೇಳಿದರು.

ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಮನುಷ್ಯನಿಗೆ ಎಲ್ಲ ಸೌಕರ್ಯಗಳಿದ್ದು, ಶಾಂತಿ, ನೆಮ್ಮದಿಯ ಕೊರತೆ ಇದೆ. ಮಹಾತ್ಮರ ಸತ್ಸಂಗದಲ್ಲಿ ಭಾಗವಹಿಸಿ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನೆಮ್ಮದಿ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.

ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ಶ್ರೀಶೈಲದ ಜಗದ್ಗುರುಗಳು ಧರ್ಮದ ಉಳಿವಿಗಾಗಿ, ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ ಯಡಿಯೂರದಿಂದ ಶ್ರೀಶೈಲದವರೆಗೆ ಪಾದಯಾತ್ರೆ ಮಾಡಿದ್ದು ಸ್ಮರಣೀಯ ಎಂದು ಹೇಳಿದರು.

ಕರಭಂಟನಾಳದ ಗುರು ಗಂಗಾಧರೇಶ್ವರ ಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಮನುಷ್ಯ ಯಾವುದೇ ರೋಗ ರುಜಿನ ಇಲ್ಲದೆ ಬದುಕಬೇಕಾರೆ ಕಾಯಕ ಮಾಡಬೇಕು. ಜೊತೆಗೆ ಶುದ್ಧ ನೀರು, ಉತ್ತಮ ಆಹಾರ ಸೇವಿಸಬೇಕು. ಜೊತೆಗೆ ಒಂದು ತಿಂಗಳಾದರೂ ಶರಣರು, ಸಂತರ ಆಚಾರ ವಿಚಾರಗಳನ್ನು ಆಲಿಸಬೇಕು ಎಂದರು.

ದೇವರಹಿಪ್ಪರಗಿ ಮಠದ ವೀರಗಂಗಾಧರ ಶಿವಚಾರ್ಯರು, ಗ್ರಾಪಂ ಅಧ್ಯಕ್ಷ ಶರಣಮ್ಮ ಕುಂಬಾರ, ಉಪಾಧ್ಯಕ್ಷ ಸಂಗಪ್ಪ ಸಜ್ಜನ, ಬಸವಸೈನ್ಯದ ಅಧ್ಯಕ್ಷ ಶಂಕರಗೌಡ ಬಿರಾದಾರ ಇತರರಿದ್ದರು.

ಢವಳಗಿ, ಕಣಕಾಲ ಮಠದ ಘನಮಠೇಶ್ವರ ಶ್ರೀಗಳು ಸ್ವಾಗತಿಸಿದರು. ಸಂಗಮೇಶ ಹಳ್ಳೂರ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಕುಂಭಮೇಳ, ಅಡ್ಡಪಲಕ್ಕಿ ಉತ್ಸವ ಜರುಗಿತು. ಶಿವಾನಂದ ಹುಲ್ಲೂರ, ರಾಜಶೇಖರ ಹುಲ್ಲೂರ, ಶಿವಪ್ಪ ದಿನ್ನಿ, ಕಾಶಿನಾಥ ಸಜ್ಜನ, ಜಿ.ಕೆ.ದಿನ್ನಿ, ಬಸವಲಿಂಗ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net