

ಬೆಂಗಳೂರು: ಶಿಷ್ಯರ ಯೋಗ್ಯತೆಯನ್ನು ಹೆಚ್ಚಿಸುವುದಕ್ಕಾಗಿ ಶ್ರೀಗುರು ನಿರಂತರವಾಗಿ ಯತ್ನಿಸುತ್ತಾನೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು. ವಿಜಯನಗರ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿರುವ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಪ್ರಖ್ಯಾತಿ ಗಳಿಸಬೇಕೆಂದು ಹಂಬಲಿಸುತ್ತಾನೆ. ಯಾವುದೇ ಕ್ಷೇತ್ರದಲ್ಲಿ ಪ್ರಖ್ಯಾತಿ ಗಳಿಸಲು ಯೋಗ್ಯತೆ ಅವಶ್ಯವಾಗಿದ್ದು, ಶಿಷ್ಯನ ಯೋಗ್ಯತೆಯನ್ನು ಹೆಚ್ಚಿಸುವ ಶಕ್ತಿ ಶ್ರೀಗುರುವಿನಲ್ಲಿರುತ್ತದೆ. ಆ ಕಾರಣಕ್ಕಾಗಿ ಶಿಷ್ಯನ ಪ್ರಖ್ಯಾತಿಗಾಗಿ ಗುರು ಲೋಕವಿಖ್ಯಾತನಾಗಬೇಕು. ಲೌಕಿಕ ಸ್ಥಾನಮಾನವನ್ನು ಪಡೆಯಲು ಬೇಕಾದ ಪ್ರಖ್ಯಾತಿಯ ಜೊತೆಗೆ ಅಲೌಕಿಕವಾದ ಮುಕ್ತಿ ಮಾರ್ಗವನ್ನು ಪಡೆಯುವುದಕ್ಕೂ ಕೂಡಾ ಯೋಗ್ಯತೆಯ ಅವಶ್ಯಕತೆ ಇದೆ. ಹಾಗೆ ಲೌಕಿಕ ಮತ್ತು ಅಲೌಕಿಕ ಯೋಗ್ಯತೆಯನ್ನು ಹೆಚ್ಚಿಸಿ ಶಿಷ್ಯನ ಬದುಕನ್ನು ಪರಿಪೂರ್ಣವನ್ನಾಗಿಲು ಶ್ರೀಗುರು ಸಮರ್ಥನಾಗಿರುತ್ತಾನೆ. ಅಂತಹ ಶ್ರೀಗುರುವಿಗೆ ಶರಣಾಗುವ ಬಗೆಯನ್ನು ಶ್ರೀಜಗದ್ಗುರು ರೇಣುಕಾಚಾರ್ಯರು ಶ್ರೀಸಿದ್ಧಾಂತ ಶಿಖಾಮಣಿಯ ‘ಗುರುಕಾರುಣ್ಯ ಸ್ಥಲ’ದಲ್ಲಿ ವಿಶದವಾಗಿ ತಿಳಿಸಿದ್ದಾರೆ ಎಂದು ಶ್ರೀಶೈಲ ಜಗದ್ಗುರುಗಳು ವಿವರಿಸಿದರು.
ನೀಲಗಲ್ ಮಠದ ಶ್ರೀರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭೂತಿಪುರ, ಶಿವಗಂಗೆ, ಕರಿಭಂಟನಾಳ ಶ್ರೀಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಎಂಡಿ ಟಿ.ಸೋಮು ಮತ್ತು ಡಾ.ಭ್ರಮರಾ ಶಿವಶಂಕರ್ ಅವರಿಗೆ ಗುರುರಕ್ಷೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಯುವ ಗಾಯಕ ಮತ್ತು ಸಂಗೀತ ನಿರ್ದೇಶಕ ವಿವೇಕ್ ಜಂಗ್ಲಿ ಗಾಯನ ನೆರೆದವರ ಗಮನ ಸೆಳೆಯಿತು.
ಭಾರತೀಯ ಸಂಸ್ಕೃತಿಯಲ್ಲಿ ಗುರುಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಗುರುವೆಂದರೆ ಶಿಷ್ಯನ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿ ಅಂತರಂಗ, ಬಹಿರಂಗದ ಕಲ್ಯಾಣವನ್ನು ಮಾಡುವ ಮಹಾ ಶಕ್ತಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಜಗತ್ತಿನ ಇನ್ನಾವುದೇ ದೇಶಗಳಲ್ಲಿಲ್ಲದ ಸಂಸ್ಕಾರದ ಸಂಪತ್ತು ಸಮೃದ್ಧವಾಗಿರುವುದಕ್ಕೆ ಕಾರಣ ನಮ್ಮ ಸನಾತನ ಗುರುಪರಂಪರೆ. ಅಂತಹ ಗುರುಪರಂಪರೆಯಲ್ಲಿ ವೀರಶೈವ ಧರ್ಮ ಪ್ರಮುಖವಾಗಿದ್ದು, ಶ್ರೀಶೈಲ ಜಗದ್ಗುರುಗಳು ಗುರುಪೂರ್ಣಿಮೆ ಅಂಗವಾಗಿ ಬೆಂಗಳೂರಿನ ಸದ್ಭಕ್ತರಿಗೆ ಶ್ರೀಸಿದ್ಧಾಂತ ಶಿಖಾಮಣಿಯ ಪ್ರವಚನದ ಮೂಲಕ ಜ್ಞಾನಸುಧೆಯನ್ನು ಹರಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.