

ಬೆಂಗಳೂರು: ಕನ್ನಡ ಸಾಹಿತ್ಯದಲ್ಲಿ ಪ್ರಕೃತಿ ಸಂಬಂಧ ರಚಿಸಿರುವ ಕಥೆಗಳನ್ನು ಇಂದಿನ ಮಕ್ಕಳಿಗೆ ಹೇಳಬೇಕು. ಅವು ಮಕ್ಕಳಲ್ಲಿ ಸಹಜವಾಗೇ ಪರಿಸರ ಪ್ರಜ್ಞೆ ಮೂಡಿಸುತ್ತವೆ ಎಂದು ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಸಲಹೆ ನೀಡಿದ್ದಾರೆ.
ಭಾರತೀಯ ಸಮಾಜ ಸೇವಾ ಟ್ರಸ್ಟ್ ಬಸವನಗುಡಿಯ ನಿಡುಮಾಮಿಡಿ ಮಠದಲ್ಲಿ ಬುಧವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ವಾರ್ಷಿಕ ಪರಿಸರ ಸಂರಕ್ಷಣಾ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ಉಳಿಸಿ-ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಹಿರಿಯರು ಪ್ರಕೃತಿಯ ಜೊತೆಜೊತೆಗೆ ಬದುಕಿದ್ದಾರೆ. ಅವರ ಅನುಭವ ಕಥನಗಳನ್ನು ಮುಂದಿನ ತಲೆಮಾರಿಗೆ ವಿಸ್ತರಿಸಿಬೇಕು ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಮಾತನಾಡಿ, ಮಾನವ ಸಮುದಾಯ ಬದುಕಿರುವುದೇ ಪಂಚಭೂತಗಳ ಆಧಾರದಿಂದ. ಪ್ರಕೃತಿ ಇಲ್ಲದಿದ್ದರೆ ನಾವಿಲ್ಲ. ಈ ವಿಚಾರಗಳಿಂದ ಕಲಿತುಕೊಳ್ಳುವುದು ಸಾಕಷ್ಟಿದೆ ಎಂದು ತಿಳಿಸಿದರು.
ಪ್ರಕೃತಿ ಸೇವೆಯ ಸಂಕೇತವಾಗಿದರೆ, ಸೇವೆ ಪ್ರಕೃತಿಯ ಸಂಕೇತವಾಗಿದೆ. ಸಮೃದ್ಧ ಪರಿಸರ ಮನುಷ್ಯನ ಬದುಕನ್ನು ಸುಂದರಗೊಳಿಸುತ್ತದೆ. ಆದರೆ ಮನುಷ್ಯರ ಸ್ವಾರ್ಥದಿಂದ ಭೂಮಿಯೊಳಗಿನ ಸಂಪತ್ತು, ಜೀವವೈವಿಧ್ಯತೆ ನಾಶವಾಗುತ್ತಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಮಾನವನ ಸ್ವಾರ್ಥಕ್ಕೆ ಪರಿಸರ ಬಲಿಯಾಗುತ್ತಿದೆ. ಇದರಿಂದ ಹಲವು ದುರಂತಗಳು ಸಂಭವಿಸುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಉಳಿಗಾಲವಿಲ್ಲ. ಮಕ್ಕಳು, ಯುವಜನತೆ ಈ ಬಗ್ಗೆ ಕಾಳಜಿ ಬೆಳೆಸಿಕೊಂಡು ಸ್ವಯಂಪ್ರೇರಿತವಾಗಿ ಜಾಗೃತಿ ಮೂಡಿಸಬೇಕು.
-ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಸಂಸ್ಥಾನ ಮಠ