

ಮೈಸೂರು; ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ಡಾ.ಚದುರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತಿ ಡಾ.ಚದುರಂಗ(ಡಾ.ಸುಬ್ರಹ್ಮಣ್ಯರಾಜೇ ಅರಸ್) ಅವರ 109ನೇ ಜನ್ಮದಿನದ ಸಂಭ್ರಮ ಕಾರ್ಯಕ್ರಮದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯ ಸಹಾಯಕ ಆಡಳಿತಾಧಿಕಾರಿ ಪಿ.ಸರಳಾ, ಚಿಟ್ಟೆಗಳ ಸಂಶೋಧಕ ಅರುಣ್‌ಕುಮಾರ್‌ರಾಜೇ ಅರಸ್, ಉಪನ್ಯಾಸಕಿ, ಕವಿ ಲಕ್ಷ್ಮೀ ಕಿಶೋರ್ ಅರಸ್, ಬೆಟ್ಟದತುಂಗಾ ಗ್ರಾಪಂ ಅಧ್ಯಕ್ಷೆ ಪ್ರೀತಿ ಅರಸ್, ಮಂಡ್ಯದ ಅರಸು ಮಂಡಳಿ ಸಂಘದ ಅಧ್ಯಕ್ಷ ಜೆ.ಎಂ. ಮಾದರಾಜೇ ಅರಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚದುರಂಗ ಅವರ ಸೊಸೆ ವಿಜಯಲಕ್ಷ್ಮೀ ಮಾತನಾಡಿ, ಸಣ್ಣ ಕಥೆಗಾರ, ಕಾದಂಬರಿಕಾರ, ನಾಟಕಕಾರರಾಗಿದ್ದ ಚದುರಂಗರು ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರು. ಅವರು ಅನೇಕ ಕೃತಿಗಳನ್ನು ಬರೆದಿದ್ದಾರೆ. ಈ ಪೈಕಿ ಸಣ್ಣಕಥೆ ಕೃತಿಗಳನ್ನಾದರೂ ಓದಬೇಕು ಎಂದರು.
ಚದುರಂಗರು ಮಾನವೀಯ ಮೂರ್ತಿ. ಅವರ ಜೀವನದಲ್ಲಿ ಮಾನವೀಯ ಗುಣಗಳು ಎದ್ದುಕಾಣುತ್ತಿದ್ದವು. ಮೃದು ಭಾಷಿಕರು. ಏರುಧ್ವನಿಯಲ್ಲಿ ಗಟ್ಟಿಯಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮಹಿಳೆಯರನ್ನು ಗೌರವದಿಂದ ಕಾಣುತ್ತಿದ್ದರು ಎಂದು ತಿಳಿಸಿದರು.
ಮೈಸೂರು ಅರಸು ಮಂಡಳಿ ಸಂಘದ ಅಧ್ಯಕ್ಷ ಎಚ್.ಎಂ.ಟಿ.ಲಿಂಗರಾಜೇ ಅರಸ್, ಟ್ರಸ್ಟ್‌ನ ಗೌರವಾಧ್ಯಕ್ಷ ಬಿ.ವಿಜಯ ಅರಸ್, ಸಾಹಿತಿ ಪ್ರೊ.ಸಿ.ನಾಗಣ್ಣ, ಕೆಯುಎಂಸಿ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಶ್ರೀಧರ್‌ರಾಜೇ ಅರಸ್, ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಡಾ.ಎಂಜಿ.ಆರ್.ಅರಸ್ ಇದ್ದರು.