

ಹಾಸನ: ಹನ್ನೆರಡನೇ ಶತಮಾನದ ಶಿವ ಶರಣರ ಚಿಂತನೆ, ಆದರ್ಶಗಳನ್ನು ಜನಮಾನಸಕ್ಕೆ ತಲುಪಿಸಲು ಸುತ್ತೂರು ಶ್ರೀ ಮಠ ನಿರಂತರ ಪ್ರಯತ್ನ ನಡೆಸಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ನಗರದ ತಣ್ಣೀರುಹಳ್ಳ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪದ್ಯವೂ ಅಲ್ಲದ ಗದ್ಯವೂ ಅಲ್ಲದ ವಿಶೇಷ ಸಾಹಿತ್ಯ ಪ್ರಕಾರವೆಂದೇ ಬಿಂಬಿತವಾಗಿರುವ ವಚನಗಳ ಸಾರವನ್ನು ಮನೆ, ಮನೆಗಳಿಗೆ ತಲುಪಿಸುವ ನಿರಂತರ ಪ್ರಯತ್ನ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಸುತ್ತೂರು ಶ್ರೀ ಮಠದ ಹಿರಿಯ ಜಗದ್ಗುರುಗಳ ಪರಿಶ್ರಮದ ಫಲವಾಗಿ ಪರಿಷತ್ತಿನ ಚಟುವಟಿಕೆಗಳು ಮುಂದುವರಿದಿರುವುದು ಹೆಮ್ಮೆಯ ವಿಷಯವಾಗಿದೆ. ಜತೆಗೆ ನಾಡಿನ ಉದ್ದಗಲಕ್ಕೂ ಗ್ರಾಮೀಣ ಭಾಗದಲ್ಲಿ ಶಾಲಾ, ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡುವ ಕೆಲಸ ಪ್ರಶಂಸೆಗೆ ಪಾತ್ರವಾಗಿದೆ ಎಂದು ಬಣ್ಣಿಸಿದರು.
ಜಿಲ್ಲೆಯ ಎಂಟು ತಾಲೂಕು ಕೇಂದ್ರಗಳಲ್ಲಿ ಸದಸ್ಯತ್ವ ನೋಂದಣಿ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಮುಂಬರುವ ಜೂನ್ ವೇಳೆಗೆ ಗುರಿ ತಲುಪಬೇಕು. ಸದಸ್ಯತ್ವ ನೋಂದಣಿ ಜತೆಗೆ ದತ್ತಿ ನಿಧಿ ಸ್ಥಾಪನೆಗೆ ಆದ್ಯತೆ ಕೊಡುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕಿದೆ. ಶರಣರ ಜಯಂತಿ ಆಚರಣೆಯಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಂಘಟನೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಸಲಹೆ ನೀಡಿದರು.
ಕದಳಿ ವೇದಿಕೆ ರಾಜ್ಯ ಸಂಚಾಲಕಿ ಹಾಗೂ ಸಾಹಿತಿ ಸುಶೀಲಾ ಸೋಮಶೇಖರ್ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಕೆಲಸದ ಜತೆಗೆ ಕದಳಿ ವೇದಿಕೆ ಮಹಿಳಾ ಚಿಂತನೆ ಪಸರಿಸಲು ಶ್ರಮಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಶಿ ಗಾಂಜಿ, ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಖಜಾಂಚಿ ರುದ್ರಸ್ವಾಮಿ ಸೇರಿದಂತೆ ವಿವಿಧ ತಾಲೂಕು ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.