

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ. ಸೋಮಶೇಖರ ಮಂಗಳವಾರ ಕುಟ್ಟ ಮತ್ತು ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕುಟ್ಟ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವ್ಯಾಸಂಗ ಮಾಡುತ್ತಿರುವ ಬಗ್ಗೆ, ಪಾಲಕರ ವೃತ್ತಿ ಸೇರಿದ್ದಂತೆ ಹಲವು ಮಾಹಿತಿ ಪಡೆದರು. ಪ್ರತಿಯೊಬ್ಬರೂ ಚೆನ್ನಾಗಿ ಓದಬೇಕು. ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದು ಚೆನ್ನಾಗಿ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಸಮಯಪಾಲನೆ ಅತೀ ಅವಶ್ಯಕ ಎಂದು ಸಲಹೆ ನೀಡಿದರು.
ಶಿಕ್ಷಕ, ವೈದ್ಯ, ಗಗನಸಖಿ, ಪಶುವೈದ್ಯ, ಎಂಜಿನಿಯರ್ ಸೇರಿದ್ದಂತೆ ವಿವಿಧ ಹುದ್ದೆಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಗುರಿ ಬಹಿರಂಗ ಪಡಿಸಿ ದರು. ಶಾಲೆಯ ಪರಿಸರ, ಪ್ರಯೋಗಾಲಯ, ಕ್ರೀಡಾ ಕೊಠಡಿ ವೀಕ್ಷಿಸಿ ಅಧ್ಯಕ್ಷರು ಮೆಚ್ಚುಗೆ ವ್ಯಕ್ತ ಪಡಿಸಿದರು. ಗಡಿಭಾಗ ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮವಾಗಿದ್ದು, ಮತ್ತಷ್ಟು ಸಂಪನ್ಮೂಲ ಒದಗಿಸಲು ಅಗತ್ಯ ನೆರವು ನೀಡಲಾಗುವುದೆಂದರು.
ಕಾನೂರು ಮತ್ತು ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ತರಗತಿಗೆ ಅಗತ್ಯ ಅನುದಾನ ಒದಗಿಸಲಾಗುವುದು. ಗಡಿ ಪ್ರದೇಶ ದಲ್ಲಿರುವ ಶಾಲೆಯ ಅಭಿವೃದ್ಧಿಗೆ ಪ್ರಾಧಿಕಾರದಿಂದ ಆರ್ಥಿಕ ನೆರವು ನೀಡಲಾಗುವುದೆಂದರು. ಕುಟ್ಟ ಸರ್ಕಾರಿ ಪ್ರೌಢ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮನವಿಯಂತೆ ಅಗತ್ಯ ನೆರವು ನೀಡಲಾಗುವುದೆಂದರು. ಗಡಿ ಪ್ರದೇಶದಲ್ಲಿ ಕನ್ನಡ ಮತ್ತು ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪೌಢಶಾಲೆ ಸ್ಥಿತಿಗತಿ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾಹಿತಿ ನೀಡಿದರು. ಶಾಲಾಭಿವೃದ್ಧಿ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದರು. ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿಭಾಗದ ತೋಳ್ಪಟ್ಟಿ ಗಡಿಪ್ರದೇಶಕ್ಕೆ ಅಧ್ಯಕ್ಷರು ಭೇಟಿ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ವೇದಮೂರ್ತಿ, ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಶಶಿಧರ, ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಮಣಿ, ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ, ನಿವೃತ್ತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ, ಉಪತಹಸೀಲ್ದಾರ್ ಜನಾರ್ಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮತ್ತಿತರರು ಇದ್ದರು.