

ಮಂಡ್ಯ: ಡಿಕೆಶಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾತನಾಡಲ್ಲ. ನಮ್ಮ ಪಕ್ಷ ಸಧೃಢವಾಗಿದ್ದು, ಯಾರ ಅವಶ್ಯಕತೆಯೂ ಇಲ್ಲ. ರಾಜಕೀಯದಲ್ಲಿ ಯಾರಾದರೂ ಬರಬಹುದು, ಯಾರಾದರೂ ಹೋಗಬಹುದು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಸಚಿವ ಜಮೀರ್ ಹೇಳಿಕೆಗೆ ನಗರದಲ್ಲಿ ತಿರುಗೇಟು ನೀಡಿದ ಅವರು, ನಿನ್ನ ಸಂಪರ್ಕದಲ್ಲಿದ್ದರೇ ಏನು ಬೇಕಾದರೂ ಮಾಡಪ್ಪ. ನಿನಗೆ ಅಡ್ಡ ಬಂದವರೂ ಯಾರಪ್ಪ ಜಮೀರ್?. ನಿಮಗೆ ತಾಕತ್ತಿದ್ದರೇ ಮಾಡಿ ತೋರಿಸಪ್ಪ ಎಂದರು.
ನಾನು ಯಾರ ಮೇಲೂ ದ್ವೇಷ ಮಾಡಲ್ಲ. ಆದರೆ ಕಾಂಗ್ರೆಸ್ ರೀತಿ ಕೀಳುಮಟ್ಟದ ರಾಜಕಾರಣ ಮಾಡಲ್ಲ. ಯಾವತ್ತಾದರೂ ನಾವೂ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದಿದ್ದೀವಾ. ಯಾರು ಹೋಗುವವನು ಇದ್ದಾರೋ ಅವರನ್ನು ಕರೆದುಕೊಂಡು ಹೋಗಲಿ. ಅವರ ಪಕ್ಷದಲ್ಲಿನ ಜಗಳವನ್ನು ನಮ್ಮನ್ನು ತೋರಿಸಿ ಸರಿಪಡಿಸಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಸರ್ಕಾರ ಬೀಳಿಸುವುದಕ್ಕೆ ಪ್ರಯತ್ನ ಎನ್ನುತ್ತಾರೆ. ಅವರ ಮಾತು ಕೇಳಿ ನನಗೆ ನಗು ಬಂತು. ನಮ್ಮನ್ನು ತೋರಿಸಿ ಅವರ ಸಿಎಂ ಸ್ಥಾನ ಭದ್ರ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ. ಮುಂದೆ ಚುನಾವಣೆಗೆ ಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.