ಬದುಕು ಹಸನಾಗಿಸಿದೆ ಸಂವಿಧಾನ: ಉಪನ್ಯಾಸಕ ರವಿಕುಮಾರ

31SND-07
Published on

ಸಿಂಧನೂರು: ಡಾ.ಬಿ.ಆರ್.ಅಂಬೇಡ್ಕರ್ ದಲಿತರ ಮತ್ತು ಶೋಷಣೆಗೆ ಒಳಗಾದ ಜನಾಂಗದವರ ಆಶಾಕಿರಣರಾಗಿದ್ದಾರೆ ಎಂದು ಉಪನ್ಯಾಸಕ ರವಿಕುಮಾರ ಹೇಳಿದರು.
ವಿದ್ಯಾನಗರದಲ್ಲಿ ಶಿಕ್ಷಕ ಕನಕಪ್ಪ ದೊಡ್ಡಮನಿ ನಿವಾಸದಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮನೆಮನೆಗೆ ಮಹಾನಾಯಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಸಮತಾ ಸಮಾಜದ ಕನಸನ್ನು ಕಂಡಿದ್ದರು. ಅವರು ಊಟ, ಮನೆ ಬಿಟ್ಟು ಓದಿನ ಕಡೆ ಆಸಕ್ತಿವಹಿಸಿದ್ದರ ಫಲವಾಗಿ ಜೀವನದಲ್ಲಿ ಯಶಸ್ಸು ಕಂಡರು. ಸಂವಿಧಾನವು ನಮ್ಮೆಲ್ಲರ ಬದುಕು ಹಸನಾಗಿಸಿದೆ ಎಂದರು.


ಚೆನ್ನದಾಸರ ಸಮಾಜ ಸೇವಾ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಗೊರೇಬಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನ ಭಾರತೀಯತೆಯನ್ನು ಪ್ರತಿಪಾದಿಸುತ್ತದೆ. ಭಾರತದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಜೀವಿಸುವ, ಮಾತನಾಡುವ ಹಕ್ಕನ್ನು ನೀಡಿದೆ. ಅದು ಭಾರತೀಯರ ಪಾಲಿನ ಸಂಜೀವಿನಿ ಇದ್ದಂತೆ ಎಂದರು.


ಪರಿಷತ್ ಗೌರವ ಸಲಹೆಗಾರ ನಾರಾಯಣಪ್ಪ ಮಾಡಸಿರವಾರ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಮಣ್ಣ ಹಿರೇಭೇರಿಗಿ, ಹಾರಾಪೂರದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ರವೀಂದ್ರಗೌಡ, ಹೊಸಳ್ಳಿ (ಇ.ಜೆ) ಸಿಆರ್‌ಪಿ ಬಸವರಾಜ ಅಂಗಡಿ, ಶಿಕ್ಷಕ ಅಜ್ಜಪ್ಪ, ತುಳಸಿದಾಸ, ಆಂಜನೇಯ ರಾಮತ್ನಾಳ, ಅಯ್ಯಪ್ಪ ಹರೇಟನೂರು, ನಬಿಸಾಬ್, ಡಾ.ಅರುಣಕುಮಾರ ಭೇರಿಗಿ, ಎಚ್.ಎಫ್.ಮಸ್ಕಿ, ಪರಿಷತ್ತಿನ ಖಜಾಂಚಿ ಶರಣಪ್ಪ ಹೊಸಳ್ಳಿ, ಸದಸ್ಯರಾದ ಡಾ.ವೆಂಕಟನಾರಾಯಣ, ಮಂಜುನಾಥ ಸೋಮಲಾಪುರ, ವೆಂಕಟೇಶ ನವಲಿ, ರವಿಕುಮಾರ ಮಲ್ಲಾಪುರ, ಚನ್ನಮಲ್ಲ, ತಿಮ್ಮಣ್ಣ ಕಲಮಂಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net