ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಿ: ಡಾ.ಬಿ.ಆರ್.ಅಂಬೇಡ್ಕರ್ ಆರ್ಮಿ ರಾಜ್ಯಾಧ್ಯಕ್ಷ ಗಂಗರಾಜು ಹನಕೆರೆ ಹೇಳಿಕೆ

Dr. BR Ambedkar Army press conference Mandya
Published on

ಮಂಡ್ಯ: ರಾಜ್ಯ ಸರ್ಕಾರದ ಮುಂದಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ/ಟಿಎಸ್‌ಪಿ ಯೋಜನೆಗೆ 2 ಲಕ್ಷ ಕೋಟಿ ರೂ ಅನುದಾನ ನೀಡಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಆರ್ಮಿ ರಾಜ್ಯಾಧ್ಯಕ್ಷ ಗಂಗರಾಜು ಹನಕೆರೆ ಒತ್ತಾಯಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರ ಅಭಿವೃದ್ಧಿಗೆ 2013-14ರಲ್ಲಿ ವಿಶೇಷ ಘಟಕ ಯೋಜನೆಯನ್ನು ಜಾರಿಗೊಳಿಸಿ ಅಂದಿನಿಂದ 2024-25ನೇ ಸಾಲಿನವರೆಗೂ ಸುಮಾರು 2 ರಿಂದ 3 ಲಕ್ಷ ಕೋಟಿ ರೂ.ಗೂ ಮೇಲ್ಪಟ್ಟು ಅನುದಾನ ಬಿಡುಗಡೆ ಮಾಡಿದೆ. ಆದರೆ ಅನುದಾನದ ಬಳಕೆಯಾಗಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಎಸ್ಸಿ, ಎಸ್ಟಿ ವರ್ಗದ ಜನರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಇನ್ನಿತರೆ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿಯಾಗಿಲ್ಲವಾದ್ದರಿಂದ ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿರಿಸಬೇಕು. ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುವಂತೆ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನ ನಾಲ್ಕು ಕಡೆಯಲ್ಲಿಯೂ 10 ಸಾವಿರ ಎಕರೆ ಪ್ರದೇಶದಲ್ಲಿ ನಿವೇಶನ, ಮನೆ, ಉದ್ಯೋಗ ಸೃಷ್ಟಿ, ಕೈಗಾರಿಕೆ ಸೃಷ್ಟಿಸಲು ಉಚಿತವಾಗಿ ಶೇ.90ರಷ್ಟು ಅನುದಾನ ನೀಡಲು ಮುಂದಾಗುವಂತೆ ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಇದುವರೆಗೂ ಮೀಸಲಿರಿಸಿದ್ದ 1.5 ಲಕ್ಷ ಕೋಟಿ ರೂಗಳನ್ನು ಹಿಂಪಡೆದು ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷವೂ ಗ್ಯಾರೆಂಟಿ ಯೋಜನೆಗಳಿಗೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಹಣ ಬಳಸಿಕೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಅನ್ಯಾಯವೆಸಗಲಾಗಿದೆ. ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಲು ಒತ್ತಾಯಿಸಿ ವಿಧಾನಸೌದ ಚಲೋ ಚಳವಳಿ ಆಯೋಜಿಸಲಾಗಿದೆ ಎಂದು ಹೇಳಿದರು.

ಬುದ್ಧ ಭಾರತ ಫೌಂಡೇಷನ್‌ನ ಜೆ.ರಾಮಯ್ಯ, ಎಂ.ವಿ.ಕೃಷ್ಣ, ಲೋಕೇಶ್, ಚೌದರಿ, ಪ್ರದೀಪ್‌ಗೌಡ, ಜಿ.ಅಮೃತ್, ಸುಭಾಷ್ ಧರಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net