ಮಾನಸಿಕ ಸ್ಥೈರ್ಯದಿಂದಲೇ ಚೇತರಿಸಿಕೊಂಡೆ: ಶಾಸಕ ಡಾ.ವೈ.ಭರತ್ ಶೆಟ್ಟಿ

bharath shetty new
Published on

ಕರೊನಾ ಸೋಂಕಿನಿಂದ ಗುಣವಾಗಿ ಸದ್ಯ ಹೋಂ ಕ್ವಾರಂಟೈನ್‌ನಲ್ಲಿರುವ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ, ವೈದ್ಯರೂ ಆಗಿರುವ ಡಾ.ಭರತ್ ಶೆಟ್ಟಿ ತಮ್ಮ ಅನುಭವವನ್ನು ‘ವಿಜಯವಾಣಿ’ ಜತೆ ಇಲ್ಲಿ ಹಂಚಿಕೊಂಡಿದ್ದಾರೆ.

ಮಂಗಳೂರು: ಕರೊನಾ ಪಾಸಿಟಿವ್ ಬಂದಿದೆ ಎಂದಾಕ್ಷಣ ಜನ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ನಾನು ಮಾನಸಿಕ ಸ್ಥೈರ್ಯದಿಂದಲೇ ಚೇರಿಸಿಕೊಂಡೆ.

ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ಪಾಸಿಟಿವ್ ಬಂದವರ ಪೈಕಿ ಮೃತಪಟ್ಟವರ ಸಂಖ್ಯೆ ಕಡಿಮೆ. ಶೇ.98ಮಂದಿ ಗುಣವಾಗಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಸರಿಯಾಗಿ ಪಾಲಿಸಿದರೆ ಈ ಮಹಾಮಾರಿಯಿಂದ ಪಾರಾಗಲು ಸಾಧ್ಯವಿದೆ.

ಮನೆಯಲ್ಲಿ ಪ್ರತ್ಯೇಕ ರೂಂನಲ್ಲಿದ್ದೆ

ಕ್ಷೇತ್ರದ ಶಾಸಕನಾಗಿ ಜನರ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಲಾಕ್‌ಡೌನ್ ಅವಧಿಯಲ್ಲೂ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದೆ. ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ ತಿಂಗಳಿನಿಂದಲೇ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿದ್ದೆ. ಇತ್ತೀಚೆಗೆ ಜ್ವರ, ಮೈಕೈ ನೋವು ಕಾಣಿಸಿಕೊಂಡಿತ್ತು. ಎರಡು ದಿನದ ಬಳಿಕ ಆಘ್ರಾಣಿಸುವ ಶಕ್ತಿ ಕೊಂಚ ಕ್ಷೀಣವಾಯಿತು. ತಕ್ಷಣ ಕೋವಿಡ್ ಪರೀಕ್ಷೆ ನಡೆಸಿದೆ. ಪಾಸಿಟಿವ್ ವರದಿ ಬಂತು. ರಕ್ತದಲ್ಲಿ ಆಕ್ಸಿಜನ್ ಲೆವೆಲ್ ಸರಿಯಾಗಿತ್ತು. ಇತರ ಯಾವುದೇ ತೊಂದರೆ ಇರಲಿಲ್ಲ. ಆದರೆ ಜ್ವರ ಕಡಿಮೆಯಾಗದ ಕಾರಣ ಆಸ್ಪತ್ರೆಗೆ ದಾಖಲಾದೆ.

ಆಸ್ಪತ್ರೆಗಳಿಂದ ರೋಗಿಗಳಿಗೆ ಧೈರ್ಯ

ಪಾಸಿಟಿವ್ ಇದ್ದರೂ ಎಲ್ಲ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ. ಆಸ್ಪತ್ರೆಯಲ್ಲಿ ಕೋವಿಡ್‌ಗೆ ಪ್ರತ್ಯೇಕ ಚಿಕಿತ್ಸೆ ಇಲ್ಲ. ವಿಟಮಿನ್ ಮಾತ್ರೆ ನೀಡಲಾಗುತ್ತದೆ, ತೀರಾ ಅವಶ್ಯ ಇದ್ದರೆ ಜ್ವರಕ್ಕೆ ಹಾಗೂ ರೋಗ ನಿರೋಧಕ ಔಷಧ ನೀಡುತ್ತಾರೆ. ಉಸಿರಾಟ ತೊಂದರೆ ಕಾಣಿಸಿಕೊಂಡರೆ ಮಾತ್ರ ಐಸಿಯುಗೆ ದಾಖಲಿಸುತ್ತಾರೆ. ಆಸ್ಪತ್ರೆಯಲ್ಲಿ ಆಗಾಗ ರಕ್ತದೊತ್ತಡ, ರಕ್ತ ಪರೀಕ್ಷೆ ಸಹಿತ ವಿವಿಧ ಪರೀಕ್ಷೆ ನಡೆಸುವ ಕಾರಣ ರೋಗಿಗಳಿಗೆ ಆತ್ಮಸ್ಥೈರ್ಯ ಮೂಡುತ್ತದೆ.

ಸಾಕಷ್ಟು ಪುಸ್ತಕಗಳನ್ನು ಓದಿದೆ ಶಾಸಕನಾದ ಬಳಿಕ ಯಾವತ್ತೂ ಇಷ್ಟು ದಿನ ವಿಶ್ರಾಂತಿ ಪಡೆದಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದರೂ ಕೆಲ ದಿನ ಹೋಂ ಕ್ವಾರಂಟೈನ್ ಕಡ್ಡಾಯ. ಈ ಅವಧಿಯಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿದೆ. ದೃಶ್ಯ ಮಾಧ್ಯಮಗಳಲ್ಲಿ ಕರೊನಾ ರಣಕೇಕೆ, ಕರೊನಾ ಅಬ್ಬರ ಎಂದು ಸುದ್ದಿ ಪ್ರಸಾರ ಅಗುವ ಮೂಲಕ ಭಯದ ವಾತಾವರಣ ನಿರ್ಮಾಣವಾಗುತ್ತಿದೆ.

ಪಾಸಿಟಿವ್ ಇದ್ದವರನ್ನು ಅಸ್ಪ್ರಶ್ಯರಂತೆ ಕಾಣುವ ಸ್ಥಿತಿ ಇದೆ. ಇದು ಸರಿಯಲ್ಲ. ಕರೊನಾ ಪಾಸಿಟಿವ್ ಇದ್ದರೆ ಕುಟುಂಬದವರು ಧೃತಿಗೆಡಬಾರದು. ಸಮಾಜವೂ ಸಹಕರಿಸಬೇಕು. ನಾವು ಮಾನಸಿಕ ಸ್ಥೈರ್ಯ ನೀಡಿದರೆ ಸಾಕು. ಸೋಂಕಿತರು ಕೆಲವೇ ದಿನದಲ್ಲಿ ಚೇತರಿಸಿಕೊಳ್ಳುತ್ತಾರೆ. - ಡಾ.ಭರತ್ ಶೆಟ್ಟಿ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net