

ಮಂಡ್ಯ: ವೈದ್ಯ ಬೆಸಗರಹಳ್ಳಿ ರಾಮಣ್ಣ ಸಮಾಜದ ಅವ್ಯವಸ್ಥೆಯ ವಿರುದ್ಧ, ತಮ್ಮ ಸಾಹಿತ್ಯದ ಮೂಲಕ ಸಿಟ್ಟು ಹೊರಹಾಕಿದ್ದಾರೆ ಎಂದು ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ಆಯೋಜಿಸಿದ್ದ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರದಾನ ಹಾಗೂ ಒರೆಗಲ್ಲು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಮಾರು 56 ಕಥೆಗಳನ್ನು ಡಾ.ಬೆಸಗರಹಳ್ಳಿ ರಾಮಣ್ಣ ರಚಿಸಿದ್ದು, ಅವರ ಕಥೆಗಳಲ್ಲಿ ತಾಯ್ತನದ ಭಾವ ಕೂಡಿದೆ. ಅವರ ಎಲ್ಲ ಕಥೆಗಳಲ್ಲೂ ನೆಲದ ಘಮಲು ತುಂಬಿರುತ್ತಿತ್ತು. ಕಿರುಚಿತ್ರಗಳಿಗೆ ಬೇಕಾದ ಸರಕು ರಾಮಣ್ಣ ಅವರ ಕಥೆಯಲ್ಲಿವೆ. ಪುಟ್ಟ ಪರಿಸರದ ಚೌಕಟ್ಟಿನಲ್ಲಿ ಕಥೆಯನ್ನು ಹೇಳುತ್ತಿದ್ದ ರಾಮಣ್ಣ ಅವರು, ಸ್ಥಳೀಯ ಭಾಷಾ ಸೊಗಡನ್ನು ಬಸಿದು ಕಥನ ಕಟ್ಟಿ ಜಿಲ್ಲೆಯ ಸಾಂಸ್ಕೃತಿಕ ನೆಲೆಗಳನ್ನು ವಿಸ್ತರಿಸಿದ್ದಾರೆ ಎಂದರು.
ಡಾ.ಬೆಸಗರಹಳ್ಳಿ ರಾಮಣ್ಣ ಅವರ ಪುತ್ರ ಹಾಗೂ ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ಮಾತನಾಡಿ, ನಮ್ಮ ತಂದೆ ತೀರಿಕೊಂಡಾಗ ಅವರಿಗೆ 59 ವರ್ಷ. ಅವರು ಯಾವ ಮೌಲ್ಯಗಳನ್ನು ಪ್ರತಿಪಾದಿಸಿದ್ದರೊ, ಅದರಂತೆಯೇ ಬದುಕಿದ್ದವರು. ಅವರ ನೆನಪಿನಲ್ಲಿ ಪ್ರತಿಷ್ಠಾನ ಆರಂಭಿಸಿ 2007 ರಿಂದ ರಾಮಣ್ಣ ಅವರ ಆಶಯದಂತೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಪ್ರತಿವರ್ಷ ಕಥೆಗಾರರಿಗೆ ಪ್ರಶಸ್ತಿ ನಿಡುತ್ತ ಬರಲಾಗಿದೆ ಎಂದರು.
ಕುವೆಂಪು ಅವರ ಆಶಯದಂತೆ ಮತ್ತು ರಾಮಣ್ಣನವರ ವಿಚಾರದಂತೆ ಕುಪ್ಪಳ್ಳಿಯಲ್ಲಿ ನವೆಂಬರ್ ತಿಂಗಳಲ್ಲಿ ಮೂರು ದಿನಗಳ ಕಾಲ ವಿಚಾರ ಕಮ್ಮಟವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಸಾಹಿತಿಗಳು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಪ್ರತಿಷ್ಠಾನದಿಂದ ನೆರವು ನೀಡುವುದು, ಇದುವರೆಗಿನ 16 ಪ್ರಶಸ್ತಿಗಳಲ್ಲಿ ಐವರು ಮಹಿಳೆಯರಿಗೆ ಪ್ರಶಸ್ತಿ ಸಂದಿರುವುದು ರಾಮಣ್ಣನವರ ಆಶಯಕ್ಕೆ ಪೂರಕವಾಗಿ ನಡೆದಿದೆ ಎಂದರು.
ಪ್ರಶಸ್ತಿ ವಿಜೇತ ಕೃತಿ ಕುರಿತು ವಿಮರ್ಶಕಿ ಆರ್.ಸುನಂದಮ್ಮ ಮಾತನಾಡಿ, ಈ ವರ್ಷ ಪ್ರಶಸ್ತಿಗೆ ಕೃತಿ ಆಯ್ಕೆ ಮಾಡಲು ನನಗೆ 10 ಕೃತಿಗಳನ್ನು ನೀಡಲಾಗಿತ್ತು. ಅದರಲ್ಲಿ ಸ್ವಾಮಿ ಪೊನ್ನಾಚಿ ಅವರ ದಾರಿ ತಪ್ಪಿಸುವ ಗಿಡ ಕೃತಿಯನ್ನು ಆಯ್ಕೆ ಮಾಡಲಾಯಿತು. ಬರವಣಿಗೆ ಎನ್ನುವುದು ನಮ್ಮನ್ನು ನಾವು ತಿದ್ದಿಕೊಳ್ಳುವುದಕ್ಕೆ ಇರುವ ಅಸ್ತ್ರ. ಅದರಿಂದ ಸಮಾಜವನ್ನು ಬದಲಾವಣೆ ಮಾಡುತ್ತೇನೆ, ಸಮಾಜದ ಅಂಕು-ಡೊಂಕುಗಳನ್ನೆಲ್ಲ ಬರವಣಿಗೆಯಿಂದಲೇ ಸರಿಪಡಿಸುತ್ತೇನೆ ಎಂದುಕೊಳ್ಳುವುದು ಮೂರ್ಖತನ. ಧೂರ್ತತನ ಮತ್ತು ಕೆಟ್ಟತನದಿಂದ ಪಾರಾಗುವುದಕ್ಕೆ ಬರವಣಿಗೆ ನನಗೆ ಸಹಕಾರಿಯಾಯಿತು ಎಂದು ಬೆಸಗರಹಳ್ಳಿ ರಾಮಣ್ಣನವರೇ ಬರೆದುಕೊಂಡಿದ್ದಾರೆ ಎಂದು ಸ್ಮರಿಸಿದರು.
ಇದೇ ವೇಳೆ ‘ದಾರಿ ತಪ್ಪಿಸುವ ಗಿಡ’ ಕೃತಿಯ ಕರ್ತೃ ಸ್ವಾಮಿ ಪೊನ್ನಾಚಿ ಅವರಿಗೆ 2023ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಹಾಗೂ 25 ಸಾವಿರ ರೂ ಪುರಸ್ಕಾರದೊಂದಿಗೆ ವಿಚಾರವಾದಿ ಪ್ರೊ.ಕಾಳೇಗೌಡ ನಾಗವಾರ ಅವರನ್ನು ಅಭಿನಂದಿಸಲಾಯಿತು. ಡಾ.ಬೆಸಗರಹಳ್ಳಿ ರಾಮಣ್ಣ ಅವರ ಅಂಕಣ ಬರಹಗಳ ಸಂಕಲನದ ಮರುಮುದ್ರಣವಾದ ‘ಒರೆಗಲ್ಲು’ ಕೃತಿ ಬಿಡುಗಡೆಗೊಳಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಾಯಕಿ ಎಂ.ಡಿ.ಪಲ್ಲವಿ ಸಂಗಡಿಗರಿಂದ ಭಾವಗಾಯನ ಕಾರ್ಯಕ್ರಮ ಗಮನಸೆಳೆಯಿತು. ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತಾ, ಡಿ.ಪಿ.ರಾಜಮ್ಮ ರಾಮಣ್ಣ ಇತರರಿದ್ದರು.