

ಮಾನ್ವಿ : ಯುವ ಕವಿಗಳು ಪ್ರತಿಷ್ಠೆಗಾಗಿ ಕವಿತೆಗಳನ್ನು ರಚಿಸಿದೆ, ಸಮಾಜದಲ್ಲಿ ಬದಲಾವಣೆ ತರುವ ಕವಿತೆಗಳನ್ನು ರಚಿಸಬೇಕೆಂದು ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕಸಾಪ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಯುವ ಕವಿಗಳಿಂದ ತುಂಬಾ ಮೌಲ್ಯಯುತ ಹಾಗೂ ಸತ್ವಯುತ ಕಾವ್ಯಗಳ ರಚನೆ ಆಗಬೇಕಾದರೆ ಕಮ್ಮಟಗಳ ಅಗತ್ಯ. ಕಾವ್ಯಗಳ ಮೂಲಕ ಸಾಹಿತ್ಯ ರಚನೆ ಆರಂಭವಾಗುತ್ತದೆ. ಕಾವ್ಯಗಳ ರಚನೆಯಿಂದ ಬಹು ಬೇಗನೆ ಪ್ರಸಿದ್ಧಿ ಪಡೆಯಬಹುದು.
ಆದರೆ ನಾಟಕಕಾರ, ವಿಮರ್ಶಕ, ಕಾದಂಬರಿಕಾರ ಸಾಹಿತ್ಯ ಕ್ಷೇತ್ರದಲ್ಲಿ ಬೆಳಕಿಗೆ ಬರಲು ತಡವಾಗುತ್ತದೆ. ಯುವ ಕವಿಗಳು ಯಾವುದೇ ಸಾಹಿತ್ಯ ರಚನೆ ಮಾಡಿದಾಗ ಹಿರಿಯರ ಸಲಹೆಗಳನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.