

ಮೈಸೂರು: ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿಯ ಕುಲಪತಿಯಾಗಿ ಡಾ.ಎಚ್. ಬಸವನಗೌಡಪ್ಪ ಗುರುವಾರ ಅಧಿಕಾರ ವಹಿಸಿಕೊಂಡರು.
32 ವರ್ಷಗಳ ವೃತ್ತಿಜೀವನದಲ್ಲಿ ಡಾ.ಬಸವನಗೌಡಪ್ಪ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರು ಈವರೆಗೆ ಪ್ರೊಫೆಸರ್, ಡೀನ್, ಫ್ಯಾಕಲ್ಟಿ ಆಫ್ ಮೆಡಿಸಿನ್ ಹಾಗೂ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಶೈಕ್ಷಣಿಕ ಗುಣಮಟ್ಟವನ್ನು ನೈತಿಕತೆ ಹಾಗೂ ವೃತ್ತಿಪರತೆಯಿಂದ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಿದ ಡಾ. ಬಸವನಗೌಡಪ್ಪ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿಯ ಕುಲಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಸವನಗೌಡಪ್ಪ ಅವರ ಅಧಿಕಾರಾವಧಿಯಲ್ಲಿ ವಿಶ್ವವಿದ್ಯಾಲಯ ಮತ್ತಷ್ಟು ಔನ್ನತ್ಯಕ್ಕೆ ಹಾಗೂ ಉತ್ಕೃಷ್ಟತೆಗೆ ಮತ್ತು ಜಾಗತಿಕ ಮನ್ನಣೆಗೆ ಪಾತ್ರವಾಗಲಿ ಎಂದು ಶ್ರೀಗಳು ಹಾರೈಸಿದರು.