ಡಾ.ಬಸವಲಿಂಗ ಪಟ್ಟದ್ದೇವರು, ಡಾ.ವೀರಣ್ಣ ಬಿ. ರಾಜೂರ ಅವರಿಗೆ ಮಾಗನೂರು ಬಸಪ್ಪ ಪ್ರಶಸ್ತಿ

251
Published on

ದಾವಣಗೆರೆ: ಬಸವ ಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಧಾರವಾಡದ ವಚನ ಸಾಹಿತ್ಯ ಸಂಶೋಧಕ ಡಾ.ವೀರಣ್ಣ ಬಿ. ರಾಜೂರ ಕ್ರಮವಾಗಿ 2023 ಮತ್ತು 2024 ನೇ ವರ್ಷದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದಿಂದ ರಾಜ್ಯಮಟ್ಟದಲ್ಲಿ ವಚನ ಸಾಹಿತ್ಯ ಸಂಶೋಧನೆ, ಸಮಾಜಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದ್ದು, 50 ಸಾವಿರ ರೂ. ನಗದು ಹಾಗೂ ಆಕರ್ಷಕ ಸ್ಮರಣಿಕೆಯನ್ನು ಪ್ರಶಸ್ತಿಯು ಒಳಗೊಂಡಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಷ್ಠಾನದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಜು.27ರಂದು ಬೆಳಗ್ಗೆ 10.30ಕ್ಕೆ ಬೀದರ್‌ನ ಡಾ.ಪಟ್ಟದ್ದೇವರ ರಂಗಮಂದಿರದಲ್ಲಿ ಡಾ.ಬಸವಲಿಂಗ ಪಟ್ಟದೇವರು ಅವರಿಗೆ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಹುಲಸೂರಿನ ಡಾ.ಶಿವಾನಂದ ಶ್ರೀ, ಭಾಲ್ಕಿಯ ಗುರುಬಸವ ಪಟ್ಟದ್ದೇವರು ನೇತೃತ್ವ, ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಂಬಿಕೆ ಅಕ್ಕ ಸಮ್ಮುಖ ವಹಿಸಲಿದ್ದಾರೆ. ಅರಣ್ಯ, ಜೈವಿಕ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸುವರು, ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರಗೌಡ್ರು ಅಧ್ಯಕ್ಷತೆ ವಹಿಸುವರು. ರಾಜ್ಯ ಮುಕ್ತ ವಿವಿ ಉಪ ಕುಲಪತಿ ಶರಣಪ್ಪ ವಿ. ಹಲಸೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ಆಗಸ್ಟ್ 3ರಂದು ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ವಚನ ಸಾಹಿತ್ಯ ಸಂಶೋಧಕ ಡಾ. ವೀರಣ್ಣ ಬಿ. ರಾಜೂರ ಅವರಿಗೆ 2024ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಪ್ರಶಸ್ತಿ ಪ್ರದಾನ ಮಾಡುವರು. ಎಂ.ಜಿ. ಸಂಗಮೇಶ್ವರಗೌಡ್ರು ಅಧ್ಯಕ್ಷತೆ ವಹಿಸುವರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ. ಸೋಮಶೇಖರ ಅಭಿನಂದನಾ ನುಡಿಗಳನ್ನಾಡುವರು, ಉದ್ಯಮಿ ಬಿ.ಸಿ.ಉಮಾಪತಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ , ಡಾ.ಎಚ್.ವಿ. ವಾಮದೇವಪ್ಪ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರತಿಷ್ಠಾನದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇನ್ನುಮುಂದೆ ಪ್ರಶಸ್ತಿ ಪುರಸ್ಕೃತರ ತವರು ಜಿಲ್ಲೆಯಲ್ಲೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಆಡಳಿತಾಧಿಕಾರಿ ಎಸ್.ಆರ್. ಶಿರಗುಂಬಿ ಹೇಳಿದರು.

ಕಸಾಪ ಪದಾಧಿಕಾರಿಗಳಾದ ರಾಘವೇಂದ್ರ ನಾಯರಿ, ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ಎಸ್.ಎಂ. ಮಲ್ಲಮ್ಮ, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net