ಜೋಗಪ್ಪರಿಗೆ ಕೀಳರಿಮೆ ಬೇಡ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು

Dr. Balagangadharnath Swamiji Jayantyutsava mandya
Published on

ನಾಗಮಂಗಲ: ಈ ಆಧುನಿಕ ಸಮಾಜದಲ್ಲಿ ಯಾವ ಕೀಳರಿಮೆಯೂ ಇಲ್ಲದ ರೀತಿಯಲ್ಲಿ ಜೋಗಪ್ಪಂದಿರು ಬದುಕಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 79ನೇ ಜಯಂತ್ಯುತ್ಸವ ಹಾಗೂ 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಯೋಗಿ-ಜೋಗಿ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜೋಗಪ್ಪಂದಿರು ಊರಿಗೆ ಧಾರ್ಮಿಕ ಮುಖಂಡರಿದ್ದಂತೆ. ನಿಮ್ಮ ನಡೆ, ನುಡಿ ಎಲ್ಲವನ್ನೂ ನೋಡುತ್ತಿರುತ್ತಾರೆ. ಅದಕ್ಕೊಂದಿಷ್ಟು ತಪಸ್ಸಿನ ಅವಶ್ಯಕತೆಯಿರುತ್ತದೆ. ತಪಸ್ಸಿನ ಜತೆಗೆ ನಮ್ಮ ತತ್ವ, ಮೌಲ್ಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ನಾಥ ಪರಂಪರೆಯ ಮೌಲಿಕವಾಗಿರುವ ನಾಲ್ಕು ನಿಯಮಗಳ ಚೌಕಟ್ಟಿನಲ್ಲಿ ಸಮಾಜವನ್ನು ಮತ್ತಷ್ಟು ಎತ್ತರಕ್ಕೆ ಕಟ್ಟಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಪುರುಷಪ್ಪಂದಿರು, ಜೋಗಪ್ಪಂದಿರು, ಚೂಡಪ್ಪಂದಿರು ಮತ್ತು ಸುಬೇದಾರ್‌ಗಳಿಗೆ ಶ್ರೀಮಠದ ನಾಥ ಪರಂಪರೆ ಇರುವ ಮೌಲಿಕ ತತ್ವ, ನಿಯಮಗಳನ್ನು ಸೃಷ್ಟಿಸಿ ಅವುಗಳನ್ನು ಅನುಸರಿಸುವ ತರಬೇತಿಯನ್ನೂ ನೀಡಲಾಗುವುದು ಎಂದು ತಿಳಿಸಿದರು.

ಅನ್ನ, ಅಕ್ಷರ, ಜ್ಞಾನ ದಾಸೋಹ, ಕೌಶಲಾಭಿವೃದ್ಧಿ ಸೇರಿದಂತೆ ಯಾವುದೇ ತರಹವಾದ ಸೇವೆ ನೀಡಲು ಆದಿಚುಂಚನಗಿರಿ ಮಠ ಸಜ್ಜಾಗಿದೆ. ಆದರೆ ಆ ಮಠ ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಸೇವೆ ನೀಡಬೇಕೆಂದರೆ ಪಡೆದುಕೊಂಡದ್ದಕ್ಕೆ ಪ್ರತಿಯಾಗಿ ಮಠದ ಕಣಜ ತುಂಬಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪಡೆದುಕೊಂಡು ಕೊಡುವ ವ್ಯಕ್ತಿ ಕೃತಜ್ಞನಾಗುತ್ತಾನೆ. ಸಮಾಜದಲ್ಲಿ ಸಿಗುವಂತಹ ಎಲ್ಲ ಸಂಪನ್ಮೂಲಗಳನ್ನು ಶ್ರೀಮಠಕ್ಕೆ ತಂದು ತನ್ಮೂಲಕ ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಪರಸ್ಪರ ಕೆಲಸ ಮಾಡುವ ದೊಡ್ಡ ಜವಾಬ್ದಾರಿ ಜೋಗಪ್ಪಂದಿರ ಮೇಲಿದೆ ಎಂದು ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್, ಶ್ರೀಗಳ ಆಶೀರ್ವಾದಿಂದ ಜಾತ್ಯತೀತವಾಗಿ ಸಹಸ್ರಾರು ಸಂಖ್ಯೆಯ ಯೋಗಿ ಮತ್ತು ಜೋಗಿಗಳನ್ನು ಒಟ್ಟಿಗೆ ಸೇರಿಸುವುದು ಪುಣ್ಯದ ಕೆಲಸ. ಐತಿಹಾಸಿಕ ಪರಂಪರೆ ಹೊಂದಿರುವ ಶ್ರೀಮಠದಲ್ಲಿ ಶಿಕ್ಷಣ ಪಡೆದಿರುವ ಪ್ರತಿಯೊಬ್ಬರೂ ಉದಾತ್ತ ಮನೋಭಾವ ಬೆಳೆಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು. ಶ್ರೀಮಠದಲ್ಲಿ ಸಿಗುವ ಹರ್ಷ, ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.

ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಮಾತನಾಡಿ, ಪ್ರಪಂಚದಾದ್ಯಂತ ಇರುವ ಶಾಖಾ ಮಠಗಳಲ್ಲಿ ಉಳಿದುಕೊಂಡು ಮಕ್ಕಳಿಗೆ ಬೇಕಾದ ಶಿಕ್ಷಣ ಕೊಡಿಸಬಹುದಾದ ವ್ಯವಸ್ಥೆಯನ್ನು ಕಲ್ಪಿಸಿರುವ ಯಾವುದಾದರೂ ಮಠ ಇದ್ದರೆ ಅದು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಾತ್ರ ಎಂದರು.

ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಹಿರಿಯ ಪತ್ರಕರ್ತ ಹರಿಪ್ರಸಾದ್, ಶಾಸಕ ಕೆ.ಎಂ.ಉದಯ್, ಮಾಜಿ ಶಾಸಕ ಎಲ್.ನಾಗೇಂದ್ರ, ಮನ್‌ಮುಲ್ ನಿರ್ದೇಶಕ ರಾಮಚಂದ್ರ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಸಹಸ್ರಾರು ಮಂದಿ ಯೋಗಿ ಮತ್ತು ಜೋಗಿಗಳು, ಮಠದ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net